

ಬಳ್ಳಾರಿ: ವಿಧಾನ ಸಭೆ ಚುನಾವಣೆ ಹಿನ್ನೆಲೆ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲು ಪ್ರಧಾನಿ ನರೇಂದ್ರ ಮೋದಿ ಅವರು ಮೇ 5ರಂದು ಗಣಿನಾಡು ಬಳ್ಳಾರಿಗೆ ಆಗಮಿಸುತ್ತಿದ್ದು, ಬಿಜೆಪಿ ಪಾಳಯದಲ್ಲಿ ಎಲ್ಲೆಡೆ ಸಂಭ್ರಮದ ವಾತಾವರಣ ಸೃಷ್ಟಿಯಾಗಿದೆ.
2018ರಲ್ಲಿ ಬಳ್ಳಾರಿಗೆ ಆಗಮಿಸಿದ್ದ ಮೋದಿ ಅವರು ಆರು ವರ್ಷಗಳ ಬಳಿಕ ಜಿಲ್ಲೆಗೆ ಆಗಮಿಸುತ್ತಿರುವುದು ಕಾರ್ಯಕರ್ತರಲ್ಲಿ ಖುಷಿ ತಂದಿದೆ.
ಈಗಾಗಲೇ ಕಾರ್ಯಕ್ರಮದ ಹಿನ್ನೆಲೆ ಭರದ ಸಿದ್ಧತೆ ಕೈಗೊಳ್ಳಲಾಗಿದ್ದು, ಬಳ್ಳಾರಿ ನಗರದ ಹೊರವಲಯದಲ್ಲಿರುವ ಸತ್ಯಂ ಶಾಲೆ ಎದುರುಗಡೆ ಇರುವ 50 ಎಕರೆ ವಿಶಾಲವಾದ ಜಾಗದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಮೋದಿ ಅವರ ಆಗಮನದ ಹಿನ್ನೆಲೆ ಕೇಂದ್ರ ಭದ್ರತಾ ಸಿಬ್ಬಂದಿ ಸ್ಥಳವನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಸುತ್ತಮುತ್ತಲ ಪ್ರದೇಶದಲ್ಲಿ ಸಂಪೂರ್ಣ ಕಣ್ಗಾವಲು ಇರಿಸಲಾಗಿದೆ. ಎಲ್ಲೆಡೆ ಬಿಗಿ ಭದ್ರತೆಗಾಗಿ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ.