

ಮೈಸೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಏ.14ರಂದು ಮೈಸೂರಿಗೆ ಆಗಮಿಸಲಿದ್ದು, ಅಂದು ಸಂಜೆ 4 ಗಂಟೆಗೆ ಮಹಾರಾಜ ಕಾಲೇಜು ಮೈದಾನದಲ್ಲಿ ಆಯೋಜಿಸಿರುವ ಬಹಿರಂಗ ಸಮಾವೇಶದಲ್ಲಿ ಕರ್ನಾಟಕ ಮೈತ್ರಿ ಕೂಟದ ಚುನಾವಣಾ ಪ್ರಚಾರಕ್ಕೆ ಅಧಿಕೃತವಾಗಿ ಚಾಲನೆ ನೀಡಲಿದ್ದಾರೆ ಎಂದು ಶಾಸಕ ಟಿ.ಎಸ್.ಶ್ರೀವತ್ಸ ತಿಳಿಸಿದರು.
ಮೈಸೂರು-ಕೊಡಗು, ಮಂಡ್ಯ, ಹಾಸನ ಹಾಗೂ ಚಾಮರಾಜನಗರ ಕ್ಷೇತ್ರಕ್ಕೆ ಪೂರಕವಾದ ಬಹಿರಂಗ ಸಮಾವೇಶ ಇದಾಗಿದ್ದು, ಈ ಸಂಬಂಧ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ 30*110 ಅಡಿ ವಿಸ್ತೀರ್ಣದ ವೇದಿಕೆ ಸಿದ್ಧ ಮಾಡಲಾಗಿದೆ. 60 ಸಾವಿರ ಚೇರ್ ವ್ಯವಸ್ಥೆ ಕಲ್ಪಿಸಲಾಗಿದೆ. ನಾಲ್ಕು ಕ್ಷೇತ್ರಗಳಿಂದ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ಒಂದು ಲಕ್ಷ ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ, ಎಚ್.ಡಿ. ಕುಮಾರಸ್ವಾಮಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ.ದೇವೇಗೌಡ, ಮುಖಂಡರಾದ ಸಾ.ರಾ.ಮಹೇಶ್, ಜಿ.ಡಿ.ಹರೀಶ್‌ಗೌಡ ಸೇರಿದಂತೆ ಹಲವು ನಾಯಕರು ಪಾಲ್ಗೊಳ್ಳಲಿದ್ದಾರೆ. ಮೈತ್ರಿ ಅಭ್ಯರ್ಥಿಗಳಾದ ಮೈಸೂರು-ಕೊಡಗು ಕ್ಷೇತ್ರ ಯದುವೀರ್, ಹಾಸನದ ಪ್ರಜ್ವಲ್ ರೇವಣ್ಣ, ಚಾಮರಾಜನಗರದ ಬಾಲರಾಜ್ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಈಗಾಗಲೇ ಎರಡನೇ ಬಾರಿ ಪ್ರಧಾನಿಯಾಗಿರುವ ನರೇಂದ್ರ ಮೋದಿ ಅವರು ಮೈಸೂರು ಸೇರಿದಂತೆ ಈ ಭಾಗಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಮೈಸೂರು-ಬೆಂಗಳೂರು ನಡುವೆ ದಶಪಥ ರಸ್ತೆ ಕಲ್ಪಿಸಿ ಗಮನ ಸೆಳೆದಿದ್ದಾರೆ ಎಂದರು.