ಕುವೆಂಪು ಅವರಿಗೆ ಭಾರತ ರತ್ನಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಭೇಟಿ ಶೀಘ್ರ

Published on

ಮೈಸೂರು: ರಾಷ್ಟ್ರಕವಿ ಕುವೆಂಪು ಅವರಿಗೆ ಭಾರತ ರತ್ನ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವ ಸಂಪುಟಕ್ಕೆ ಅಭಿನಂದನೆ ಸಲ್ಲಿಸುವುದಾಗಿ ಕುವೆಂಪು ವಿಶ್ವಮಾನವ ಕ್ಷೇಮಾಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಎಚ್.ಕೆ.ರಾಮು ಹೇಳಿದರು.

ಮೈಸೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸಾಹಿತಿಗಳು, ಮುಖಂಡರ ನಿಯೋಗದೊಂದಿಗೆ ಭೇಟಿಯಾಗಿ ಕುವೆಂಪು ಅವರಿಗೆ ಭಾರತ ರತ್ನ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವಂತೆ ಮನವಿ ಸಲ್ಲಿಸಲಾಗಿತ್ತು. ಈ ಮನವಿಗೆ ಸ್ಪಂದಿಸಿರುವುದು ಸಂತಸ ತಂದಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಟ್ರಸ್ಟ್‌ನಿಂದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೂ ಮನವಿ ಸಲ್ಲಿಸಲು ಸದ್ಯದಲ್ಲಿಯೇ ತೆರಳುತ್ತೇವೆ. ಅದಕ್ಕೂ ಮುನ್ನ ಕೇಂದ್ರ ಸಚಿವರಾದ ಎಚ್.ಡಿ.ಕುಮಾರಸ್ವಾಮಿ, ಶೋಭಾ ಕರಂದ್ಲಾಜೆ, ವಿ.ಸೋಮಣ್ಣ, ಪ್ರಲ್ಹಾದ ಜೋಶಿ, ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ವೀರಪ್ಪ ಮೋಯ್ಲಿ, ಡಾ.ಮಂಜುನಾಥ್ ಸೇರಿದಂತೆ ಹಲವರನ್ನು ಭೇಟಿ ಮಾಡಿ ಈ ಕುರಿತು ಮನವರಿಕೆ ಮಾಡಿಕೊಡಲಾಗುವುದು ಎಂದು ಹೇಳಿದರು.

ಹಿರಿಯ ಸಾಹಿತಿ ಸಿ.ಪಿ.ಕೃಷ್ಣಕುಮಾರ್ ಮಾತನಾಡಿ, ನಮ್ಮ ಮನವಿ ಇಂದು ಸಫಲವಾಗಿದ್ದು, ಮಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರಕ್ಕೆ ಶಿಫಾರಸು ಮಾಡಿದ್ದಾರೆ. ಅವರಿಗೆ ಹಾಗೂ ಸರ್ಕಾರಕ್ಕೆ ಧನ್ಯವಾದ. ಈಗ ಚೆಂಡು ಕೇಂದ್ರ ಸರ್ಕಾರದ ಅಂಗಳದಲ್ಲಿದ್ದು, ರಾಜ್ಯದಿಂದ ಆಯ್ಕೆಗೊಂಡಿರುವ ಸಂಸದರು ಒತ್ತಡ ಹಾಕಬೇಕು ಎಂದರು.

ರಾಜ್ಯ ಸರ್ಕಾರ ನಟ ಡಾ.ವಿಷ್ಣುವರ್ಧನ್ ಮತ್ತು ನಟಿ ಬಿ.ಸರೋಜಾದೇವಿ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಘೋಷಿಸಿರುವುದಕ್ಕೂ ಅಭಿನಂದನೆ ತಿಳಿಸಿದರು.

ಸಾಹಿತಿ ಪ್ರೊ.ಕೆ.ಎಸ್.ಭಗವಾನ್ ಮಾತನಾಡಿ, ರಾಜ್ಯದ ಎಲ್ಲ ಸಂಸತ್ ಸದಸ್ಯರು ಪಕ್ಷಾತೀತವಾಗಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಬೇಕು. ಇದರಿಂದ ಕೆಲಸ ಬೇಗ ಈಡೇರುತ್ತದೆ. ಒತ್ತಡ ಇಲ್ಲದಿದ್ದರೆ ಈ ಕೆಲಸ ಆಗುವುದಿಲ್ಲ. ಕುವೆಂಪು ಅವರಿಗೆ ಭಾರತ ರತ್ನ ನೀಡುವುದರಿಂದ ಭಾರತ ರತ್ನಕ್ಕೆ ಗೌರವ ಬರುತ್ತದೆ ಎಂದರು.

ನಿವೃತ್ತ ಪ್ರಾಧ್ಯಾಪಕ ಕೆ.ಟಿ.ವೀರಪ್ಪ ಮಾತನಾಡಿ, ಕುವೆಂಪು ಅವರ ಶ್ರೀರಾಮಾಯಣ ದರ್ಶನ ಕೃತಿಗಳು ಹಿಂದಿ, ಸಂಸ್ಕೃತ ಭಾಷೆಗೆ ಅನುವಾದಗೊಂಡಿದೆ. ನರೇಂದ್ರ ಮೋದಿ ಅವರಿಗೆ ಅವುಗಳನ್ನು ನೀಡುವ ಮೂಲಕ ಕುವೆಂಪು ಅವರ ಕುರಿತು ತಿಳಿಸಿಕೊಡುವ ಕೆಲಸವಾಗಬೇಕು ಎಂದರು.

ವೈದ್ಯ ಡಾ.ಎಸ್.ಪಿ.ಯೋಗಣ್ಣ ಮಾತನಾಡಿ, ಸಿದ್ದರಾಮಯ್ಯ ಅವರು ಸಾಹಿತ್ಯ ಅಭಿಮಾನಿಯಾಗಿರುವುದರಿಂದ ಶಿಫಾರಸು ನಿರ್ಧಾರ ತೆಗೆದುಕೊಂಡಿದ್ದಾರೆ. ದೆಹಲಿಯಲ್ಲಿ ಕುವೆಂಪು ಅವರ ಸಾಹಿತ್ಯ, ವಿಚಾರಧಾರೆಯನ್ನು ತಿಳಿಸಬೇಕಿದೆ. ಅದಕ್ಕಾಗಿ ವಿಚಾರ ಸಂಕಿರಣವನ್ನು ಏರ್ಪಡಿಸುವ ಆಲೋಚನೆ ಇದೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net