

ದಾವಣಗೆರೆ: ಪ್ರಧಾನಿ ನರೇಂದ್ರ ಮೋದಿ ಅವರು ಭಾಷಣದಲ್ಲಿ ತಮ್ಮ ಬಗ್ಗೆ ಹೇಳಿಕೊಳ್ಳುವುದನ್ನು ಕಡಿಮೆ ಮಾಡಿ ಕರ್ನಾಟಕದ ಜನರ ಸಮಸ್ಯೆಗಳ ಕುರಿತು ಮಾತನಾಡಲಿ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಲಹೆ ನೀಡಿದರು.
ಹರಿಹರದ ಗಾಂಧಿ ಮೈದಾನದಲ್ಲಿ ಮಂಗಳವಾರ ಸಾರ್ವಜನಿಕ ರ‌್ಯಾಲಿಯಲ್ಲಿ ಮಾತನಾಡಿ ಪ್ರಧಾನಿ ಮೋದಿ ಅವರಿಗೆ ತಮ್ಮ ಬಗ್ಗೆ ಹೇಳಿಕೊಳ್ಳಲು ಖುಷಿ ಇರುವಂತೆ ಕಾಣುತ್ತದೆ ಎಂದು ಕಾಲೆಳೆದರು.
‘ಒಂದು ಕೆಲಸ ಮಾಡಿ, ನಿಮ್ಮ ಭಾಷಣದ ಶೇ. 70ರಷ್ಟು ನಿಮ್ಮ ಕುರಿತು ಮನಸೋ ಇಚ್ಛೆ ಮಾತನಾಡಿ, ಶೇ. 30ರಷ್ಟನ್ನಾದರೂ ಕರ್ನಾಟಕದ ಬಗ್ಗೆ ಹೇಳಿ. ಇದುವರೆಗೆ ಏನು ಮಾಡಿದ್ದೀರಿ?, ಏನು ಮಾಡಿಲ್ಲ?, ನಿಮ್ಮ ತಪ್ಪುಗಳೇನೆಂದು ತಿಳಿಸಿ’ ಎಂದರು.
ನಾನು ಭಾಷಣ ಮಾಡುವಾಗ ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಸೇರಿ ಎಲ್ಲ ನಾಯಕರ ಹೆಸರು ಹೇಳುತ್ತೇನೆ. ಆದರೆ ಪ್ರಧಾನಿ ಮೋದಿ ಭಾಷಣದಲ್ಲಿ ಯಡಿಯೂರಪ್ಪ, ಬೊಮ್ಮಾಯಿ ಅಥವಾ ಸಚಿವರ ಹೆಸರು ಪ್ರಸ್ತಾಪಿಸುವುದಿಲ್ಲ, ಅವರು ತಮ್ಮ ಬಗ್ಗೆ ಮಾತ್ರ ಹೇಳಿಕೊಳ್ಳುತ್ತಾರೆ ಎಂದು ಟಾಂಗ್ ಕೊಟ್ಟರು.
ಕಾಂಗ್ರೆಸ್ ತಮ್ಮ ಮೇಲೆ 91 ಬಾರಿ ಆಕ್ರಮಣ ಮಾಡಿದೆ ಎಂದು ಪ್ರಧಾನಿ ಹೇಳಿಕೊಳ್ಳುತ್ತಾರೆ. ಮೋದಿ ಅವರೆ, ಇದು ನಿಮ್ಮ ಚುನಾವಣೆಯಲ್ಲ, ರಾಜ್ಯದ ರೈತರು, ಯುವಕರು, ಮಹಿಳೆಯರು, ಕಾರ್ಮಿಕರಿಗೆ ಸಂಬಂಧಿಸಿದ ಚುನಾವಣೆಯಾಗಿದ್ದು ಅವರ ಬಗ್ಗೆ ಒಂದಿಷ್ಟು ಮಾತನಾಡಿ ಎಂದು ಹೇಳಿದರು.
ರಾಜ್ಯದಲ್ಲಿ ನಡೆದ 40 ಪರ್ಸೆಂಟ್ ಕಮಿಷನ್ ವ್ಯವಹಾರದ ಬಗ್ಗೆ ಏನು ಕ್ರಮ ತೆಗೆದುಕೊಂಡಿದ್ದೀರಿ, ತನಿಖೆ, ವಿಚಾರಣೆಯಾಗಿದೆಯೆ, ನಿಮ್ಮ ಪ್ರಣಾಳಿಕೆಯಲ್ಲಿನ ಭರವಸೆಗಳಲ್ಲಿ ಎಷ್ಟು ಆಶ್ವಾಸನೆ ಈಡೇರಿಸಿದ್ದೀರಿ? ಎಂದು ಪ್ರಶ್ನಿಸಿದರು.
ರಾಜ್ಯದಲ್ಲಿ ಪ್ರವಾಹದಿಂದ ಜನರು ಸಂತ್ರಸ್ತರಾದಾಗ ಕೇಂದ್ರ ಸರ್ಕಾರ ನೆರವಿಗೆ ಬರಲಿಲ್ಲ. ತೆರಿಗೆಯಲ್ಲಿ ಕೇಂದ್ರದಿಂದ ರಾಜ್ಯಕ್ಕೆ ಸಿಗಬೇಕಾದ ಪಾಲು ಸಿಗದಿರುವುದು, ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ಹಿನ್ನೆಲೆಯಲ್ಲಿ ಹಿಂಸಾಚಾರ ನಡೆದಾಗ ನೀವು ಚಕಾರ ಎತ್ತಲಿಲ್ಲ. ಈ ವಿಚಾರಗಳ ಬಗ್ಗೆ ಜನರಿಗೆ ತಿಳಿಸಿ ಎಂದು ಆಗ್ರಹಿಸಿದರು.
ಕಳೆದ 3 ವರ್ಷಗಳಲ್ಲಿ ಸಾವಿರಾರು ಕೋಟಿ ರೂ.ಗಳನ್ನು ಲೂಟಿ ಮಾಡಿರುವ ಬಿಜೆಪಿಯವರು ಮುಂದಿನ 5 ವರ್ಷ ಅದನ್ನೇ ಮಾಡಲು ಹೊರಟಿದ್ದಾರೆ, ಅದಕ್ಕಾಗಿ ಮುಂದಿನ ಸರ್ಕಾರಗಳನ್ನು ಖರೀದಿಸುವ ಹುನ್ನಾರ ನಡೆಸಿದ್ದಾರೆ. ಜನರು ಕಾಂಗ್ರೆಸ್‌ಗೆ ಬಹುಮತ ನೀಡಿದರೆ ಅದನ್ನು ತಡೆಗಟ್ಟಬಹುದು ಎಂದರು.
ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ಕೆಪಿಸಿಸಿ ಕಾರ್ಯಾಧ್ಯಕ್ಷ ಚಂದ್ರಪ್ಪ ಇದ್ದರು.