

ಮೈಸೂರು: ಕಡಕೊಳದ ಮಲ್ಟಿ ಲೆವೆಲ್ ಲಾಜಿಸ್ಟಿಕ್ ಪಾರ್ಕ್, ಮೈಸೂರು ರೈಲ್ವೆ ನಿಲ್ದಾಣದಲ್ಲಿ ಜನೌಷಧ ಕೇಂದ್ರ ಹಾಗೂ ಮೈಸೂರು-ಚೆನ್ನೈ 2ನೇ ವಂದೇ ಭಾರತ್ ರೈಲು ಸೇವೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮಂಗಳವಾರ ಗುಜರಾತ್‌ನ ಅಹಮದಾಬಾದ್ ನಗರದಿಂದ ವರ್ಚುವಲ್ ವೇದಿಕೆ ಮೂಲಕ ಚಾಲನೆ ನೀಡಿದರು.
ಈ ಸಂದರ್ಭ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಂಸದ ಪ್ರತಾಪ್ ಸಿಂಹ, ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯಿಂದ 60 ಎಕರೆ ಭೂಮಿಯನ್ನು ಗುತ್ತಿಗೆ ಪಡೆದು 100 ಕೋಟಿ ರೂ. ವೆಚ್ಚದಲ್ಲಿ ಕಡಕೊಳದಲ್ಲಿ ಮಲ್ಟಿ ಲೆವಲ್ ಲಾಜಿಸ್ಟಿಕ್ ಪಾರ್ಕ್ ನಿರ್ಮಾಣ ಮಾಡಲಾಗಿದೆ. ಮಲ್ಟಿ ಲೆವಲ್ ಲಾಜಿಸ್ಟಿಕ್ ಪಾರ್ಕ್‌ನಲ್ಲಿ ಮೂರು ಪೂರ್ಣ ಪ್ರಮಾಣದ ರೈಲು ಮಾರ್ಗಗಳು, ಪ್ರತ್ಯೇಕ ಗೋದಾಮುಗಳ ವ್ಯವಸ್ಥೆ ಇದೆ. ಲೋಡಿಂಗ್, ಅನ್‌ಲೋಡಿಂಗ್ ಮಾಡುವ ವೇದಿಕೆಗಳನ್ನು ನಿರ್ಮಿಸಲಾಗಿದೆ. ಮಂಗಳೂರು ಬಂದರು ಮೂಲಕ ರಫ್ತು ಮಾಡಲು ಮಲ್ಟಿ ಲೆವಲ್ ಲಾಜಿಸ್ಟಿಕ್ ಪಾರ್ಕ್ ಸಹಕಾರಿಯಾಗಲಿದೆ ಎಂದರು.
ಯಾವುದೇ ಒಂದು ಪ್ರದೇಶ ಕೈಗಾರಿಕೆಗಳು ಬೆಳೆಯಲು ಮಲ್ಟಿ ಲೆವಲ್ ಲಾಜಿಸ್ಟಿಕ್ ಪಾರ್ಕ್‌ನ ಅವಶ್ಯಕತೆ ಇದೆ. ಸರಕುಗಳನ್ನು ಆಮದು ಮಾಡಿಕೊಳ್ಳಲು ಹಾಗೂ ಇಲ್ಲಿಂದ ರಫ್ತು ಮಾಡಲು ಮಲ್ಟಿ ಲೆವಲ್ ಲಾಜಿಸ್ಟಿಕ್ ಪಾರ್ಕ್‌ನಿಂದ ಸಹಕಾರಿಯಾಗಲಿದೆ. ಕೈಗಾರಿಕೆಗಳು ಬೆಳೆದಂತೆ ಉದ್ಯೋಗಾವಕಾಶಗಳು ಸಹ ದೊರೆಯುತ್ತದೆ. ಇನ್ನು ಮುಂದೆ ದೊಡ್ಡ ಪ್ರಮಾಣದಲ್ಲಿ ಕೈಗಾರಿಕೆಗಳು ಪ್ರಾರಂಭವಾಗುವ ನಿರೀಕ್ಷೆ ಇದೆ ಎಂದು ಹೇಳಿದರು.