ಪ್ರಧಾನಿ ನರೇಂದ್ರ ಮೋದಿ ಸರ್ಕಾರವು ಅಂಚೆ ಇಲಾಖೆಗೆ ಎಲ್ಲ ಸೌಲಭ್ಯಗಳನ್ನೂ ನೀಡುವ ಮೂಲಕ ಮೇಲ್ದರ್ಜೆಗೇರಿಸುತ್ತಿದೆ

3
Published on

ಮೈಸೂರು: ಪ್ರಧಾನಿ ನರೇಂದ್ರ ಮೋದಿ ಸರ್ಕಾರವು ಅಂಚೆ ಇಲಾಖೆಗೆ ಎಲ್ಲ ಸೌಲಭ್ಯಗಳನ್ನೂ ನೀಡುವ ಮೂಲಕ ಮೇಲ್ದರ್ಜೆಗೇರಿಸುತ್ತಿದೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.

ಮಹಿಳಾ ಅಂಚೆ ನೌಕರರಿಗೆ ತರಬೇತಿ ನೀಡುವ ಸಲುವಾಗಿ ನಜರ್‌ಬಾದ್‌ನಲ್ಲಿರುವ ಅಂಚೆ ತರಬೇತಿ ಕೇಂದ್ರ(ಪಿಟಿಸಿ)ದ ಆವರಣದಲ್ಲಿ 4.28 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಮಹಿಳಾ ವಸತಿನಿಲಯ ಹಂಸ ಕಟ್ಟಡ ಸಂಕೀರ್ಣವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು.

ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಅಂಚೆ ಇಲಾಖೆ ವಿನಾಶದ ಅಂಚಿನಲ್ಲಿತ್ತು. ಅನುದಾನ ನೀಡುವ ಕೆಲಸವನ್ನೂ ಆಗ ಮಾಡಿರಲಿಲ್ಲ ಎಂದು ದೂರಿದರು.

ನಾಲ್ಕೈದು ದಿನಗಳಲ್ಲಿ ಲೋಕಸಭಾ ಚುನಾವಣೆಯ ಅಧಿಸೂಚನೆ ಹೊರಬೀಳುವ ಸಾಧ್ಯತೆ ಇದೆ. ಹೀಗಾಗಿ ಹಲವು ಅಭಿವೃದ್ಧಿ ಕಾರ್ಯಕ್ರಮಗಳನ್ನು ದೇಶಕ್ಕೆ ಸಮರ್ಪಿಸುತ್ತಿದ್ದೇವೆ. ನಾನು ಸಂಸದನಾಗುವ ಮುನ್ನ ಮೈಸೂರಿಗೆ ಸಮರ್ಪಕ ಸಂಪರ್ಕದ ಕೊರತೆ ಇತ್ತು. ಇದರಿಂದಾಗಿ ಕೈಗಾರಿಕೆಗಳು ಬರುವುದಕ್ಕೆ ತೊಡಕಾಗಿತ್ತು. ಹೀಗಾಗಿ ನಾನು ಹೆದ್ದಾರಿ ರೈಲು ಹಾಗೂ ವಿಮಾನ ಸಂಪರ್ಕ ವ್ಯವಸ್ಥೆ ವೃದ್ಧಿಗೆ ಆದ್ಯತೆ ನೀಡಿದ್ದೇನೆ ಎಂದು ತಿಳಿಸಿದರು.

ಹಿಂದಿದ್ದ ಸಂಸದರು 2004ರಿಂದ 2014ರವರೆಗೆ ಒಂದೇ ಒಂದು ಹೊಸ ರೈಲನ್ನೂ ತಂದಿರಲಿಲ್ಲ. ನಾನು ಹಲವು ರೈಲುಗಳ ಸಂಪರ್ಕ ಕಲ್ಪಿಸಿದ್ದೇನೆ. ವಿಮಾನ ನಿಲ್ದಾಣದ ರನ್‌ವೇ ವಿಸ್ತರಣೆಗೂ ಕ್ರಮ ಕೈಗೊಳ್ಳಲಾಗಿದೆ. ಅದನ್ನು ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನಾಗಿ ಮೇಲ್ದರ್ಜೆಗೆ ಏರಿಸಲಾಗುವುದು. ಮೈಸೂರು ಈಗ ದೊಡ್ಡ ಮಟ್ಟದ ಆಭಿವೃದ್ಧಿಗೆ ಸಜ್ಜಾಗಿದೆ. ಹಲವು ಕಂಪನಿಗಳು ಬರಲಿವೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಅಂಚೆ ಸೇವೆಗಳ ದಕ್ಷಿಣ ಕರ್ನಾಟಕ ವಲಯದ ನಿರ್ದೇಶಕ ಟಿ.ಎಸ್.ಅಶ್ವತ್ಥನಾರಾಯಣ, ಪಿಟಿಸಿ ನಿರ್ದೇಶಕ ಆಶಿಶ್ ಸಿಂಗ್ ಠಾಕೂರ್, ಉಪ ನಿರ್ದೇಶಕ ಕೆ.ವಿ.ಎಲ್.ಎನ್.ಮೂರ್ತಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net