ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಾಧ್ಯಮಗಳ ಮುಂದೆ ಬರುವ ಧೈರ್ಯವೂ ಇಲ್ಲ, ತಾಕತ್ತೂ ಇಲ್ಲ: ಎಚ್.ವಿಶ್ವನಾಥ್

mysore
Published on

ಮೈಸೂರು: ನೂರ ನಲವತ್ತೆರಡು ಸಂಸದರ ಅಮಾನತು ಆದೇಶವನ್ನು ವಾಪಸ್ ಪಡೆಯುವ ಮೂಲಕ ಸಂಸತ್ ಭವನದಲ್ಲಿ ಆರೋಗ್ಯಕರ ಚರ್ಚೆಗೆ ಅವಕಾಶ ಮಾಡಿಕೊಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಒತ್ತಾಯಿಸಿದರು.

ಸಂಸತ್ತಿನ ಭದ್ರತೆ ಭೇದಿಸಿದ ಪ್ರಕರಣದ ಬಗ್ಗೆ ದೇಶದ ಜನರಿಗೆ ಸತ್ಯ ಗೊತ್ತಾಗಬೇಕು. ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಷಾ ಅವರು ಅಮಾನತುಗೊಂಡಿರುವ ಲೋಕಸಭೆ ಮತ್ತು ರಾಜ್ಯಸಭೆಯ 142 ಸದಸ್ಯರನ್ನು ಸಂಸತ್ ಒಳಗೆ ಕರೆದುಕೊಂಡು ಸಾಂವಿಧಾನಿಕವಾಗಿ ಚರ್ಚೆಗೆ ಅವಕಾಶ ನೀಡಬೇಕು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

ಪ್ರಶ್ನೆ ಮಾಡಿದ ಸಂಸದರನ್ನು ಅಮಾನತು ಮಾಡಿರುವುದು ಖಂಡನೀಯ. ಸಂಸತ್ತಿನ ನುಸುಳುಕೋರರ ಬಗ್ಗೆ ಪ್ರಶ್ನೆ ಮಾಡಿದ್ದಕ್ಕೆ ಅಮಾನತು ಮಾಡಲಾಗಿದೆ. ಮೂರು ಸುತ್ತಿನ ಭದ್ರತೆ ಇದ್ದರೂ ಭದ್ರತಾ ಲೋಪ ಹೇಗೆ ನಡೆಯಿತೆಂದು ಕೇಳೋದು ತಪ್ಪಾ ಎಂದು ಪ್ರಶ್ನಿಸಿದ ಅವರು, ಸಂಸತ್ ಭವನ ಇರುವುದೇ ಆಡಳಿತ ಪಕ್ಷವನ್ನು ಪ್ರಶ್ನೆ ಮಾಡುವುದಕ್ಕೆ ಎಂದರು.

ಸಂಸತ್ ಜನಪ್ರತಿನಿಧಿಗಳಿಗೆ ಪ್ರಶ್ನೆ ಮಾಡುವ ವೇದಿಕೆ. ಅಲ್ಲಿ ಪ್ರಶ್ನೆ ಮಾಡಬೇಡ ಎಂದರೆ ತಪ್ಪಾಗುತ್ತದೆ. ಉತ್ತರ ನೀಡುವ ಮನೋಭಾವ ಆಡಳಿತ ಪಕ್ಷಕ್ಕೆ ಇರಬೇಕು. ಪ್ರಧಾನಿ, ಗೃಹಮಂತ್ರಿ ಈ ವಿಷಯದ ಬಗ್ಗೆ ಹೊರಗೆ ಬಂದು ಮಾತನಾಡಬೇಕು. ದೇಶದ ಜನರಿಗೆ ಸತ್ಯ ತಿಳಿಸಬೇಕು ಎಂದು ಒತ್ತಾಯಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಾಧ್ಯಮಗಳ ಮುಂದೆ ಬರುವ ಧೈರ್ಯವೂ ಇಲ್ಲ, ತಾಕತ್ತೂ ಇಲ್ಲ. ಈ ಪ್ರಕರಣವನ್ನು ಪ್ರಪಂಚವೇ ನೋಡುತ್ತಿದೆ. ‘ಬೆತ್ತಲೆ ಪ್ರಪಂಚ’ ಬರೆದವನು ಬೆತ್ತಲೆ ಆಗಬಹುದು. ಸಂಸತ್ ಹಾಗೂ ಅಲ್ಲಿನ ಪ್ರಶ್ನೋತ್ತರವನ್ನು ದುರ್ಬಲಗೊಳಿಸಲಾಗುತ್ತಿದೆ. ಹೀಗೆ ಮಾಡಿದರೆ ಪ್ರಜಾಪ್ರಭುತ್ವವನ್ನೇ ದುರ್ಬಲಗೊಳಿಸಿದಂತೆ. ಪ್ರಶ್ನೆ ಮಾಡೋದೇ ಬೇಡವೆಂದು ಹಟ ತೊಟ್ಟರೆ ಹೇಗೆ? ಇದು ಸಂವಿಧಾನಕ್ಕೆ ಮಾರಕ. ಹೀಗಾದರೆ, ಮುಂದೆ ಬರುವ ಜನಪ್ರತಿನಿಧಿಗಳಿಗೆ ಏನು ಕಲಿಸುತ್ತಿದ್ದೀರಿ ಎಂದು ಪ್ರಶ್ನಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net