ದೇಶ ವಿರೋಧಿಗಳ ಪರ ಕಾಂಗ್ರೆಸ್ : ಮಹಾರಾಷ್ಟ್ರ ಡಿಸಿಎಂ ಫಡ್ನವಿಸ್ ವಾಗ್ದಾಳಿ

MAHARASTRA CM
Published on

ಕೊಪ್ಪಳ: ಪ್ರಧಾನಿ ನರೇಂದ್ರ ಮೋದಿ, ಸಿಎಂ ಬಸವರಾಜ ಬೊಮ್ಮಾಯಿ ಡಬಲ್ ಇಂಜಿನ್ ಸರ್ಕಾರಕ್ಕೆ ಮಂಜುಳಾ ಕರಡಿಯನ್ನು ಗೆಲ್ಲಿಸಿ ಹೊಸ ಬೋಗಿ ಸೇರಿಸಿದರೆ ಅಭಿವೃದ್ಧಿ ಡಬಲ್ ಆಗಲಿದೆ ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಹೇಳಿದರು.

ಭಾಗ್ಯನಗರ ಪಟ್ಟಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಬಿಜೆಪಿ ಪ್ರಬುದ್ಧರ ಸಭೆಯಲ್ಲಿ ಮಾತನಾಡಿದರು. ಭಾರತ ಮಾತೆಗೆ ಜೈ ಅನ್ನುವವರಿಗೆ ಮತ ನೀಡಿ. ದೇಶ ವಿರೋಧಿಗಳ ಪರ ಕಾಂಗ್ರೆಸ್ ಇದೆ. ಹಿಂದುಸ್ತಾನದಲ್ಲಿ ಬಜರಂಗ ಬಲಿ, ಶ್ರೀರಾಮನಿಗೆ ಜೈಕಾರ ಹಾಕುವುದನ್ನು ಕಾಂಗ್ರೆಸ್‌ಗೆ ಅಪರಾಧವಾಗಿದೆ ಎಂದು ಟೀಕಿಸಿದರು.

ಮತದಾರರು ಕಾಂಗ್ರೆಸ್ ವಿರುದ್ಧ ಮತ ಚಲಾಯಿಸಿ

ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ, ಹಿಂದು ಶಬ್ದ ಅಶ್ಲೀಲ ಎಂದಿದ್ದಾರೆ. ಅವರಿಗೆ ಇಷ್ಟವಿಲ್ಲದಿದ್ದರೆ ಅನ್ಯ ಧರ್ಮಕ್ಕೆ ಮತಾಂತರವಾಗಲಿ. ಆಂಜನೇಯ ಲಂಕೆಗೆ ಬೆಂಕಿ ಇಟ್ಟಂತೆ, ಮತದಾರರು ಕಾಂಗ್ರೆಸ್ ವಿರುದ್ಧ ಮತ ಚಲಾಯಿಸಿ ಅವರ ಅಧಿಕಾರದ ಆಸೆಗೆ ಬೆಂಕಿ ಇಡಬೇಕು. ಕಾಂಗ್ರೆಸ್ ಆಡಳಿತದಲ್ಲಿ 100ರೂ.ನಲ್ಲಿ ಕೇವಲ 15ರೂ. ಫಲಾನುಭವಿಗೆ ತಲುಪುತ್ತಿತ್ತು. ಮೋದಿ ಅವರು ಅಧಿಕಾರಕ್ಕೆ ಬಂದ ಮೇಲೆ ಎಲ್ಲ ಹಣ ಫಲಾನುಭವಿ ಖಾತೆಗೆ ನೇರವಾಗಿ ಜಮೆ ಆಗುತ್ತಿದೆ ಎಂದರು.

ದೇಶದಲ್ಲಿ ಸುದೀರ್ಘ ಅಧಿಕಾರ ನಡೆಸಿದ ಕಾಂಗ್ರೆಸ್ ಬಡತನ ನಿವಾರಣೆ ಹೆಸರಿನಲ್ಲಿ ಶ್ರೀಮಂತವಾಗಿದೆ. ಜನರ ಬದುಕನ್ನು ಬಡತನದತ್ತ ಕೊಂಡೊಯ್ದಿದೆ. ಇಂದು ವಿಶ್ವವೇ ಭಾರತವನ್ನು ಬೆರಗಾಗಿ ನೋಡುತ್ತಿದೆ. ವಿಶ್ವವನ್ನೇ ಕಾಡಿದ ಕರೊನಾ ಮಹಾಮಾರಿಗೆ ಭಾರತ ಮೊದಲು ಲಸಿಕೆ ಕಂಡು ಹಿಡಿದು ಅನೇಕ ರಾಷ್ಟ್ರಗಳಿಗೆ ಪೂರೈಸಿದೆ. ಅಭಿವೃದ್ಧಿಗಾಗಿ ಬಿಜೆಪಿ ಬೆಂಬಲಿಸಿ ಎಂದು ಮನವಿ ಮಾಡಿದರು.

ಜಗತ್ತು ಕಂಡ ಶ್ರೇಷ್ಠ ನಾಯಕ ಮೋದಿ

ಬಿಜೆಪಿ ಅಭ್ಯರ್ಥಿ ಮಂಜುಳಾ ಕರಡಿ ಮಾತನಾಡಿ, ಜಗತ್ತು ಕಂಡ ಶ್ರೇಷ್ಠ ನಾಯಕ ಮೋದಿ ಅವರ ಆಡಳಿತ ವಿಶ್ವವೇ ಮೆಚ್ಚುತ್ತಿದೆ. ಮಹಿಳೆಯರ ಬಹುಕಾಲದ ಸಮಸ್ಯೆಗಳಿಗೆ ಯೋಜನೆಗಳ ಮೂಲಕ ಪರಿಹಾರ ಒದಗಿಸಿದ್ದಾರೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net