ಪ್ರಧಾನಿ ಮೋದಿ ಹೇಳಿಕೆ ಸಂವಿಧಾನ ವಿರೋಧಿ

images
Published on

ಮಂಗಳೂರು: ದೇಶದಲ್ಲಿ ಶೇ. 26ರಷ್ಟಿರುವ ದಲಿತ ಸಮುದಾಯಗಳು ಹಾಗೂ ಶೇ. 18ರಷ್ಟಿರುವ ಮುಸ್ಲಿಂ ಸಮುದಾಯದ ನಡುವೆ ಕಂದಕ ಸೃಷ್ಟಿಸಿ ದ್ವೇಷ ಉಂಟು ಮಾಡುವ ಹೇಳಿಕೆಯನ್ನು ನೀಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಸಂವಿಧಾನ ವಿರೋಧಿ ನಡೆಯನ್ನು ಅನುಸರಿಸಿದ್ದಾರೆ. ಇದನ್ನು ಖಂಡಿಸುವುದಾಗಿ ಪರಿಶಿಷ್ಟ ಜಾತಿಗಳು ಮತ್ತು ಬುಡಕಟ್ಟುಗಳ ಸಂಘ ಸಂಸ್ಥೆಗಳ ಮಹಾ ಒಕ್ಕೂಟದ ಅಧ್ಯಕ್ಷ ಲೋಲಾಕ್ಷ ಹೇಳಿದರು.

ಗುರುವಾರ ಸುದ್ದಿಗೋಷ್ಟಿಯನ್ನು ಮಾತನಾಡಿದ ಅವರು, ಪರಿಶಿಷ್ಟ ಜಾತಿಗಳು ಮತ್ತು ಬುಡಕಟ್ಟುಗಳ ಸಂಘ ಸಂಸ್ಥೆಗಳ ಮಹಾ ಒಕ್ಕೂಟದ ಅಧ್ಯಕ್ಷ ಲೋಲಾಕ್ಷ, ಇಂತಹ ಹೇಳಿಕೆ ರೈಲ್ವೇ ನಿಲ್ದಾಣದಲ್ಲಿ ಚಹಾ ಮಾರುವವರು ಮಾತನಾಡಿದ್ದರೆ ಅದು ಬೇರೆ. ಆದರೆ ಪ್ರಧಾನಿ ಹುದ್ದೆಯಲ್ಲಿರುವ ನರೇಂದ್ರ ಮೋದಿ ತಮ್ಮ ಹುದ್ದೆಯ ಘನತೆಗೆ ವಿರುದ್ಧವಾಗಿ ಮತಾನಾಡಿದ್ದಾರೆ ಎಂದರು.

ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದಲಿತರು, ಹಿಂದುಳಿದವರು ಮತ್ತು ಬುಡಕಟ್ಟುಗಳ ಜನರ ಮೀಸಲಾತಿ ಕಡಿಮೆ ಮಾಡಿ ಅದನ್ನು ಮುಸ್ಲಿಮರಿಗೆ ನೀಡಲಾಗುತ್ತದೆ ಮತ್ತು ಈ ಸಮುದಾಯಗಳ ಸಂಪತ್ತನ್ನೂ ದೋಚಿ ಅವರಿಗೆ ನೀಡಲಾಗುತ್ತದೆ ಎಂಬ ಹೇಳಿಕೆ ಖಂಡನೀಯ. ಇದು ಸಂವಿಧಾನದ ಮೂಲ ಆಶಯವಾದ ಭಾತೃತ್ವಕ್ಕೆ ಚ್ಯುತಿ ತಂದಿದೆ ಎಂದರು.

ದಲಿತ ಸಂಘಟನೆಗಳ ಸಮನ್ವಯ ಸಮಿತಿಯ ಸಂಚಾಲಕ ದೇವದಾಸ್ ಅವರು ಮಾತನಾಡಿ, ಮೇಲ್ವರ್ಗದ ಜಾತಿವಾದಿಗಳಿಂದ ದಲಿತರ ಮೇಲೆ ದೌರ್ಜನ್ಯ ನಡೆಯುತ್ತ ಬಂದಿದೆಯೇ ಹೊರತು, ಮುಸ್ಲಿಂ ಸಮುದಾಯದಿಂದ ದಲಿತರ ಮೇಲಿನ ದೌರ್ಜನ್ಯ ನಿರ್ದಶನ ಅಪರೂಪ. ಅದರಲ್ಲೂ ದಲಿತರಲ್ಲಿ ಯಾವ ಸಂಪತ್ತು ಏನಿದೆ ಎಂದರು.

ವಿವಿಧ ದಲಿತ ಸಂಘಟನೆಗಳ ಮುಖಂಡರಾದ ಶೇಖರ ಚಿಲಿಂಬಿ, ಅನಿಲ್, ಮೋಹನಾಂಗಯ್ಯ, ಶ್ರೀನಿವಾಸ, ಸರೋಜಿನಿ ಬಂಟ್ವಾಳ, ಲಕ್ಷ್ಮಣ್ ಕಾಂಚನ್ ಮೊದಲಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net