

ಹಿರೇಕೆರೂರ: ರಕ್ತದಾನ ಮಾಡುವುದರಿಂದ ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿರುವ ರೋಗಿಗಳಿಗೆ ಸಂಜೀವಿನಿಯಾಗಿ, ಒಂದು ಜೀವ ಬದುಕಿಸಬಹುದು. ಇದನ್ನರಿತು ಎಲ್ಲರೂ ರಕ್ತದಾನ ಮಾಡಲು ಮುಂದಾಗಬೇಕು ಎಂದು ಮಾಜಿ ಸಚಿವ ಬಿ.ಸಿ. ಪಾಟೀಲ ಹೇಳಿದರು.
ಪಟ್ಟಣದ ಸಾನು ಅವರ ಮೈದಾನದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಜನ್ಮದಿನಾಚರಣೆಯ ನಿಮಿತ್ತ ನಮೋ ಭಾರತ ವತಿಯಿಂದ ಭಾನುವಾರ ಏರ್ಪಡಿಸಿದ್ದ ರಕ್ತದಾನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು. ಜಗತ್ತೇ ಇಂದು ಮೋದಿಯವರ ಆಡಳಿತದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದೆ. ಮುಂಬರುವ ದಿನಗಳಲ್ಲಿ ಇವರ ನಾಯಕತ್ವದಲ್ಲಿ ಜಗತ್ತಿಗೆ ಭಾರತ ವಿಶ್ವಗುರುವಿನ ಸ್ಥಾನ ಪಡೆಯಲಿದೆ. ರಕ್ತದಾನ ಮಾಡುವುದರಿಂದ ಹೊಸ ರಕ್ತ ಉತ್ಪತ್ತಿಯಾಗಿ ದೇಹಾರೋಗ್ಯ ಸುಧಾರಿಸುತ್ತದೆ. ರಕ್ತದಾನ ಅತಿ ಶ್ರೇಷ್ಠವಾಗಿದ್ದು, ಮೋದಿಯವರ ಜನ್ಮದಿನದಂದು ನಮೋ ಭಾರತ ವತಿಯಿಂದ ಇಂತಹ ಶಿಬಿರ ಆಯೋಜಿಸಿರುವುದು ಪ್ರಶಂಸನೀಯ ಎಂದರು.
ಶಿಬಿರದಲ್ಲಿ 78 ಜನ ರಕ್ತದಾನ ಮಾಡಿದರು.
ನಮೋ ಭಾರತ ಸಂಚಾಲಕ ಜಗದೀಶ ದೊಡ್ಡಗೌಡ್ರ, ಟಿಎಪಿಎಂಎಸ್ ಅಧ್ಯಕ್ಷ ಎಸ್.ಎಸ್. ಪಾಟೀಲ, ತಾಲೂಕು ಬಿಜೆಪಿ ಮಂಡಲದ ಅಧ್ಯಕ್ಷ ಶಿವಕುಮಾರ ತಿಪ್ಪಶೆಟ್ಟಿ, ರವಿಶಂಕರ ಬಾಳಿಕಾಯಿ, ರವಿ ಖಂಡಿಬಾಗೂರ, ರುದ್ರೇಶ ಬೇತೂರ, ದೇವೇಂದ್ರ ಬಡಿಗೇರ, ಬಸವರಾಜ ಚಿಂದಿ, ಕುಮಾರ ಮರಿಗೌಡ್ರ, ಎನ್.ಎಸ್. ಚಿಕ್ಕನರಗುಂದಮಠ ಇದ್ದರು.