

ಮಡಿಕೇರಿ: ಸೈನಿಕರಿಗೆ ಹಲವಾರು ಯೋಜನೆ ನೀಡಿರುವ ಪ್ರಧಾನಿ ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗಬೇಕು ಎಂದು ಭಾರತೀಯ ಜನತಾ ಪಾರ್ಟಿ ಸೈನಿಕ ಪ್ರಕೋಷ್ಠದ ರಾಜ್ಯ ಸಂಚಾಲಕ ಮೇಜರ್ ಓಡಿಯಂಡ ಎಸ್.ಚಿಂಗಪ್ಪ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೇಂದ್ರ ಸರ್ಕಾರದ ಯೋಜನೆಗಳನ್ನು ಸೈನಿಕರಿಗೆ ತಿಳಿಯಪಡಿಸುವ ನಿಟ್ಟಿನಲ್ಲಿ ಬಿಜೆಪಿ ಸೈನಿಕ ಪ್ರಕೋಷ್ಠವನ್ನು ಆರಂಭಿಸಲಾಗಿತ್ತು. ಇದರ ಭಾಗವಾಗಿ ಜಿಲ್ಲಾ ಸಂಘಟನೆಯಿಂದ ಮನೆಮನೆ ಭೇಟಿ ಕಾರ್ಯಕ್ರಮ ೨೦೧೭ರಿಂದ ಮಾಡಲಾಗಿದೆ. ಜಿಲ್ಲೆಯಲ್ಲಿ ೩೪ ತಂಡಗಳು ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು.
ಕೇಂದ್ರ ಸರ್ಕಾರದಿಂದ ಒಂದು ಶ್ರೇಣಿ ಒಂದು ಹುದ್ದೆ, ಮಹಿಳೆಯರಿಗೆ ಸೇನೆಯಲ್ಲಿ ಖಾಯಂ ಹುದ್ದೆ, ಉನ್ನತ ವಿದ್ಯಾಭ್ಯಾಸಕ್ಕಾಗಿ ಅನುದಾನ ಸೇರಿದಂತೆ ಇತರ ಯೋಜನೆಗಳನ್ನು ಜಾರಿ ಮಾಡಲಾಗಿದೆ. ಇಂತಹ ಯೋಜನೆ ನೀಡಿದ ಪ್ರಧಾನಿ ಮೋದಿ ಮತ್ತೆ ೫ ವರ್ಷ ಪ್ರಧಾನಿಯಾಗಬೇಕು ಎಂದರು.
ಕೇಂದ್ರದಿಂದ ಉದ್ಯೋಗ ಸೃಷ್ಟಿಯಾಗುತ್ತಿಲ್ಲ ಎಂದು ರಾಜ್ಯ ಸರ್ಕಾರ ಹೇಳುತ್ತದೆ. ಆದರೆ, ಕೇಂದ್ರ ಸರ್ಕಾರದ ಅಗ್ನಿ ವೀರರ ಆಯ್ಕೆ ಕಾರ್ಯಕ್ರಮದಿಂದ ಸಾಕಷ್ಟು ಯುವಕರಿಗೆ ಉದ್ಯೋಗ ಸೃಷ್ಟಿಯಾಗಿತ್ತು. ಆದರೆ ಇದನ್ನು ರದ್ದು ಮಾಡಬೇಕು ಎಂದು ರಾಜ್ಯ ಸರ್ಕಾರದ ಹೇಳುತ್ತದೆ. ಇದು ಖಂಡನೀಯ ಎಂದರು.
ಮಾಜಿ ಸೈನಿಕರಿಗೆ ಇದುವರೆಗೂ ಭೂಮಿ ಕೊಡುತ್ತಿಲ್ಲ. ಸರ್ಕಾರ ಆದೇಶ ನೀಡಿದರೂ ಜಿಲ್ಲಾಡಳಿತ ನೀಡುತ್ತಿಲ್ಲ. ಇನ್ನಾದರೂ ಜಿಲ್ಲಾಡಳಿತ ಎಚ್ಚೆತ್ತುಕೊಂಡು ಭೂಮಿ ನೀಡಬೇಕು ಎಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಪ್ರಕೋಷ್ಠದ ಸದಸ್ಯ ಕುಟ್ಟಂಡ ನಂದಾ ಮಾದಪ್ಪ, ಜಿಲ್ಲಾ ಸಹ ಸಂಚಾಲಕ ಸುಬೇದಾರ್ ಮೇಜರ್ ಪಟ್ರಪಂಡ ಕರುಂಬಯ್ಯ, ಮಡಿಕೇರಿ ಮಂಡಲ ಸಂಚಾಲಕ ಸಿ.ಕಾರ್ಯಪ್ಪ, ಜಿಲ್ಲಾ ಸದಸ್ಯರಾದ ಅಗ್ರಿ ಮನೆ ವಾಸಪ, ಎನ್.ಸೋಮಯ್ಯ ಉಪಸ್ಥಿತರಿದ್ದರು.