

ಸವದತ್ತಿ: ರೈತರ ಜೀವ ಹಿಂಡುವ ಸರ್ಕಾರವನ್ನು ದೇಶದ ಜನತೆ ಹಿಂದೆಂದೂ ಕಂಡಿರಲಿಲ್ಲ. ರೈತರ ಕುರಿತು ಒಂದು ದಿನವೂ ಮಾತನಾಡದ ಪ್ರಧಾನಿ ಮೋದಿ, ಹಿಟ್ಲರ್ ನೀತಿ ಅನುಸರಿಸುತ್ತಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು. ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಲೋಕಸಭಾ ಉಪ ಚುನಾವಣೆ ಪ್ರಚಾರಾರ್ಥ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಮೋದಿ ಅವರು ಸುಳ್ಳನ್ನೇ ಪದೇ ಪದೆ ಹೇಳಿ ಸತ್ಯ ಮಾಡಲು ಹೊರಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬೆಲೆ ಏರಿಕೆಯಿಂದ ಮನೆ ಮನೆಗೆ ಬೆಂಕಿ ಬಿದ್ದಿದೆ. ಪ್ರವಾಹ ಪರಿಹಾರ, ವಿದ್ಯಾರ್ಥಿಗಳ ಶಿಷ್ಯವೇತನವನ್ನೂ ನೀಡಿಲ್ಲ. ಸಂಬಳ ನೀಡಲು ಕೂಡ ಸರ್ಕಾರದಲ್ಲಿ ದುಡ್ಡಿಲ್ಲ. ಇಂಥ ಪರಿಸ್ಥಿತಿಯಲ್ಲಿ ಯಾರನ್ನು ಆಯ್ಕೆ ಮಾಡಬೇಕು ಎನ್ನುವುದು ಮತದಾರರಿಗೆ ಬಿಟ್ಟ ವಿಚಾರ. ಸುಳ್ಳು ಭರವಸೆ ನೀಡುವ ಮೂಲಕವೇ ಮೋದಿ ಆಡಳಿತಕ್ಕೆ ಬಂದಿದ್ದಾರೆ. ಯುವಕರಿಗೆ ಭ್ರಮೆ ಹುಟ್ಟಿಸಿ, ಕೆಲಸ ನೀಡುವ ಬದಲು ಉದ್ಯೋಗವನ್ನೇ ಕಸಿದಿದ್ದಾರೆ ಎಂದು ಕಿಡಿ ಕಾರಿದರು.
ಹಿಂಬಾಗಿಲ ಸರ್ಕಾರ: ಕೋವಿಡ್ ತಡೆಯಲು ಗಂಟೆ, ಜಾಗಟೆ, ಚಪ್ಪಾಳೆ ಬಾರಿಸಿ, ದೀಪ ಬೆಳಗಿಸಿ ಜನರನ್ನು ಮೂರ್ಖರನ್ನಾಗಿಸಿದ್ದೀರಿ. ಯಡಿಯೂರಪ್ಪನಿಗೆ ಮುಂಬಾಗಿಲಿನಿಂದ ಸರ್ಕಾರ ರಚಿಸಿ ಗೊತ್ತೇ ಇಲ್ಲ. ಆಪರೇಶನ್ ಕಮಲ ಹುಟ್ಟಿದ್ದೇ ಮಿಸ್ಟರ್ ಯಡಿಯೂರಪ್ಪ ಅವರಿಂದ. ಬಿಎಸ್‌ವೈ ಮೊದಲು ಚೆಕ್ ಮೂಲಕ ಲಂಚ ಸ್ವೀಕರಿಸುತ್ತಿದ್ದರು. ಇದೀಗ ಮಗ ವಿಜಯೇಂದ್ರ ನೇರವಾಗಿ ಆರ್‌ಟಿಜಿಎಸ್ ಮೂಲಕ ನೇರ ಲಂಚ ಸ್ವೀಕರಿಸುತ್ತಾನೆ. ಇವರಿಬ್ಬರ ಕೈಯಲ್ಲಿ ಸಿಕ್ಕು ಖಜಾನೆ ಖಾಲಿಯಾಗಿದೆ. ಈ ವಿಷಯವನ್ನು ನಾನು ವಿಧಾನಸಭೆಯಲ್ಲೂ ಪ್ರಸ್ತಾಪಿಸಿದ್ದೇನೆ ಎಂದು ಹರಿಹಾಯ್ದರು.
ಈಶ್ವರಪ್ಪ ಪೆದ್ದ: ಬಿಜೆಪಿಯವರ ಮನೆಯಲ್ಲಿ ನೋಟು ಎಣಿಕೆ ಮಾಡುವ ಯಂತ್ರಗಳಿವೆ. ಪಾಪ ಪೆದ್ದ ಈಶ್ವರಪ್ಪ, ಅಧಿಕಾರಿಗಳು ಕೇಳಿದ ಕೂಡಲೇ ಒಪ್ಪಿದರು. ಉಳಿದವರು ಪಾರಾದರು. ಬಡವರಿಗಾಗಿ ಆರಂಭಿಸಿದ್ದ ಇಂದಿರಾ ಕ್ಯಾಂಟೀನ್‌ಅನ್ನು ಮಾನಗೆಟ್ಟವರು ನಿಲ್ಲಿಸಿದರು ಎಂದ ಅವರು, ಎಂದೆಂದಿಗೂ ಕಾಂಗ್ರೆಸ್‌ಗೆ ಬೆಂಬಲಿಸಿ ಎಂದು ಸಿದ್ದರಾಮಯ್ಯ ಮನವಿ ಮಾಡಿದರು.