ಭೇಟಿಗೆ ಅವಕಾಶ ಕೊಡದ ಪ್ರಧಾನಿ ಮೋದಿ

HBL 17-Shettar CM 1
Published on

ಹುಬ್ಬಳ್ಳಿ: ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿಗೆ ನಾಲ್ಕು ತಿಂಗಳ ಹಿಂದೆ ಪತ್ರ ಬರೆದಿದ್ದೇನೆ. ಇದುವರೆಗೆ ಭೇಟಿಗೆ ಅವಕಾಶ ಸಿಕ್ಕಿಲ್ಲ. ಬರ ಪರಿಹಾರ ಸಂಬಂಧ ಸಚಿವರಾದ ಪ್ರಿಯಾಂಕ್ ಖರ್ಗೆ, ಕೃಷ್ಣ ಭೈರೇಗೌಡ, ಚಲುವರಾಯ ಸ್ವಾಮಿ ಅವರಿಗೂ ಗೃಹಸಚಿವ ಅಮಿತ್ ಷಾ ಅವಕಾಶ ಕೊಟ್ಟಿಲ್ಲ. ನನಗೇ ಕೊಟ್ಟಿಲ್ಲವೆಂದ ಮೇಲೆ ಅವರಿಗೆ ಸಿಗುವುದು ಹೇಗೆ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನೆ ಮಾಡಿದರು.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಹಣ ನಮಗೆ ಕೊಡಲು ಬಿಜೆಪಿಯವರು ಬೊಬ್ಬೆ ಹೊಡೆಯುತ್ತಾರೆ. ನನ್ನಂಥ ಮುಖ್ಯಮಂತ್ರಿ ಸ್ಥಾನದಲ್ಲಿದ್ದವರಿಗೇ ಹೀಗಾದರೆ ಉಳಿದವರ ಕತೆ ಹೇಗೆ? ಎಂದರು.

ಸುಮಾರು 35 ಸಾವಿರ ಕೋಟಿ ರೂ. ಬೆಳೆ ನಷ್ಟವಾಗಿದೆ. ಎನ್​ಡಿಆರ್​ಎಫ್ ಹಣ 18 ಸಾವಿರ ಕೋಟಿ ರೂ. ಬರಬೇಕಿದೆ. ಆದರೆ ನಿಯಮದ ಪ್ರಕಾರವೇ ಪರಿಹಾರ ಸಿಗುತ್ತಿಲ್ಲ. ಅವರೇನು ತಮ್ಮ ದುಡ್ಡು ಕೊಡುತ್ತಿಲ್ಲ. ಕರ್ನಾಟಕದಿಂದ ನಾಲ್ಕು ಲಕ್ಷ ಕೋಟಿ ರೂ. ತೆರಿಗೆ ಸಂಗ್ರಹಿಸುತ್ತಾರೆ. ದೇಶಕ್ಕೆ ಅತಿ ಹೆಚ್ಚು ತೆರಿಗೆ ನೀಡುವ ಎರಡನೇ ರಾಜ್ಯ ನಮ್ಮದು. 37 ಸಾವಿರ ಕೋಟಿ ರೂ. ಪಾಲು ನಮಗೆ ಬರುತ್ತದೆ. ಕೇಂದ್ರ ಪ್ರಾಯೋಜಿತ ಯೋಜನೆಗಳಿಗೆ 13 ಸಾವಿರ ಕೋಟಿ ರೂ. ಬರಬೇಕು. ಕರ್ನಾಟಕಕ್ಕೆ ಒಟ್ಟು 50 ಸಾವಿರ ಕೋಟಿ ರೂ. ಬರಬೇಕು. ಇನ್ನೂ ಕೊಡುತ್ತಿಲ್ಲ. ಇದನ್ನು ಕೇಳಿದರೆ ಬಿಜೆಪಿಯವರು ಜಗಳಕ್ಕೆ ಬರುತ್ತಾರೆ. ಇದು ಕನ್ನಡಿಗರ ತೆರಿಗೆ ಹಣ. ಏನು ದುಡ್ಡು ಅವರದಾ? ಮಹಾರಾಷ್ಟ್ರ ಬಿಟ್ಟರೆ ಅತಿ ಹೆಚ್ಚು ತೆರಿಗೆ ಕೊಡೋ ಜನರು ನಮ್ಮವರು. ಬಿಜೆಪಿಯವರು ಬರೀ ಭಾಷಣ ಮಾಡುತ್ತಾರೆ ಎಂದು ಆರೋಪಿಸಿದರು.

ನಾವು ಈ ಹಿಂದೆ ಇಬ್ಬರು ಅಲ್ಪಸಂಖ್ಯಾತರಿಗೆ ಟಿಕೆಟ್ ಕೊಟ್ಟಿದ್ದೇವೆ. ಈ ಬಾರಿಯೂ ಕೊಡುತ್ತೇವೆ. ಬಿಜೆಪಿಯವರು ಅಲ್ಪಸಂಖ್ಯಾತರ ಮತ ಬೇಡವೆನ್ನುತ್ತಾರೆ. ಅವರು ಭಾರತೀಯರಲ್ಲವೇ? ಬಸನಗೌಡ ಪಾಟೀಲ ಯತ್ನಾಳ ಅವರು ಗಡ್ಡ ಬಿಟ್ಟವರು, ಬುರ್ಖಾ ಹಾಕಿದವರು ಬರಬೇಡಿ ಎನ್ನುತ್ತಾರೆ. ಯತ್ನಾಳ ಅವರು ಅಲ್ಪಸಂಖ್ಯಾತರನ್ನಿಟ್ಟುಕೊಂಡು ಬಿಜಿನೆಸ್ ಮಾಡುತ್ತಾರೆ. ನರೇಂದ್ರ ಮೋದಿ, ನಿತಿನ್ ಗಡ್ಕರಿ ಜತೆಯಲ್ಲೂ ಅಲ್ಪಸಂಖ್ಯಾತರು ಇದ್ದಾರೆ. ಕಳೆದ ಚುನಾವಣೆಯಲ್ಲಿ ಯತ್ನಾಳ ಅವರನ್ನು ಸೋಲಿಸಲು ವಿಜಯಪುರದ ತನ್ವೀರ್ ಹಾಶ್ಮಿ ಕಾಂಗ್ರೆಸ್ ಅಭ್ಯರ್ಥಿ ಪರ ಕೆಲಸ ಮಾಡಿದ್ದರು. ಇದಕ್ಕಾಗಿಯೇ ತನ್ವೀರ್ ಹಾಶ್ಮಿ ವಿರುದ್ಧ ಯತ್ನಾಳ ತಿರುಗಿ ಬಿದ್ದಿದ್ದಾರೆ ಎಂದು ಜರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net