

ಕಮಲನಗರ: ಪ್ರಾಥಮಿಕ ಶಾಲೆಗಳ ಶಿಕ್ಷಕರ ವೃಂದ ನೇಮಕಾತಿ ನಿಯಮಗಳಲ್ಲಿ ಅವೈಜ್ಞಾನಿಕ ಅಂಶಗಳಿಂದಾಗಿ ಸೇವಾ ನಿರತ ಪ್ರಾಥಮಿಕ ಶಾಲೆಗಳ ಪದವೀಧರ ಶಿಕ್ಷಕರಿಗೆ ಅನ್ಯಾಯವಾಗುತ್ತಿದೆ ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಘಟಕ ಆರೋಪಿಸಿತು.
ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಹಿಂಬಡ್ತಿ ನೀಡಿರುವುದನ್ನು ಖಂಡಿಸಿ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಬಸವರಾಜ ಪಾಟೀಲ್ ನೇತೃತ್ವದಲ್ಲಿ ಮಂಗಳವಾರ ಮುಖ್ಯಮಂತ್ರಿ ಅವರಿಗೆ ಬರೆದ ಮನವಿ ಪತ್ರವನ್ನು ತಹಸೀಲ್ದಾರ್ ಅಮಿತಕುಮಾರ ಕುಲಕರ್ಣಿ ಅವರಿಗೆ ಸಲ್ಲಿಸಲಾಯಿತು.
೨೦೧೭ಕ್ಕಿಂತ ಮೊದಲು ೧ ರಿಂದ ೮ನೇ ತರಗತಿ ಬೋಧಿಸುವ ಶಿಕ್ಷಕರೆಂದು ನೇಮಕಾತಿ ಮಾಡಿಕೊಳ್ಳಲಾಗಿದೆ. ಆದರೆ ನಂತರದಲ್ಲಿ ಸೇವಾ ಹಿರಿತನ ಕಡೆಗಣಿಸಿ ಅವರಿಗೆ ೧ರಿಂದ ೫ನೇ ತರಗತಿ ಶಿಕ್ಷಕರೆಂದು ಹಿಂಬಡ್ತಿ ನೀಡಲಾಗಿದೆ. ಈ ರೀತಿಯ ಅನ್ಯಾಯ ಸರಿಯಲ್ಲ. ಹಿಂಬಡ್ತಿ ಆದೇಶ ಹಿಂದಕ್ಕೆ ಪಡೆಯಬೇಕು ಎಂದು ಆಗ್ರಹಿಸಲಾಯಿತು.
ಹೆಚ್ಚಿನ ಸೇವಾವಧಿ ಹೊಂದಿರುವ ಅರ್ಹ ಶಿಕ್ಷಕರಿಗೆ ವೃಂದ ಹಾಗೂ ನೇಮಕಾತಿ ನಿಯಮಗಳಿಂದ ಅನ್ಯಾಯವಾಗುತ್ತಿದೆ. ಈ ನಿಟ್ಟಿನಲ್ಲಿ ವೃಂದ ಹಾಗೂ ನೇಮಕಾತಿ ನಿಯಮ ತಿದ್ದುಪಡಿ ಮಾಡಬೇಕು. ೨೦೦೭ರವರೆಗೆ ನೇಮಕವಾದ ಶಿಕ್ಷಕರನ್ನು ಒಂದರಿಂದ ೭ನೇ ತರಗತಿಗೆ ನೇಮಕವಾದ ಶಿಕ್ಷಕರೆಂದು ಪರಿಗಣಿಸಬೇಕೆಂದು ಒತ್ತಾಯಿಸಲಾಯಿತು.
ಶಿಕ್ಷಕರ ಬಹುದಿನಗಳ ಬೇಡಿಕೆಗೆ ಸರ್ಕಾರ ಸ್ಪಂದಿಸದ ಕಾರಣ ಅಂತಿಮವಾಗಿ ನಿರ್ಣಾಯಕ ಹೋರಾಟ ನಡೆಸುವುದು ಅನಿವಾರ್ಯವಾಗಿದೆ. ಸಂಘದ ರಾಜ್ಯ ಸಮಿತಿ ನಿರ್ಣಯಿಸಿದಂತೆ ಆ.೧೨ರಂದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಬೃಹತ್ ಪ್ರತಿಭಟನೆ ನಡೆಯಲಿದ್ದು, ಸೇವಾ ನಿರತ ಶಿಕ್ಷಕರು ಹೋರಾಟಕ್ಕೆ ಸಜ್ಜುಗೊಳ್ಳಬೇಕಿದೆ ಎಂದು ಸಂಘದ ಪದಾಧಿಕಾರಿಗಳು ಹೇಳಿದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಬಸವರಾಜ ಪಾಟೀಲ್, ಉಪಾಧ್ಯಕ್ಷ ಬಸವರಾಜ ಮಹಾಜನ, ವಿಜಯಕುಮಾರ ನುದನೂರೆ, ಮುಖ್ಯಗುರುಗಳ ಸಂಘದ ತಾಲೂಕು ಅಧ್ಯಕ್ಷ ಬಸವರಾಜ ಜಾಗಾವೆ, ಶಾಂತಕುಮಾರ ಗುಡಮೆ, ರಾಜಕುಮಾರ ನವಾಡೆ, ಮೆಹರ್ ಸುಲ್ತಾನಾ, ಲಕ್ಷ್ಮೀಬಾಯಿ ಸಜ್ಜನಶೆಟ್ಟಿ, ಮಹಾದೇವ ಮಡಿವಾಳ, ಮಲ್ಲಿಕಾರ್ಜುನ ಚೋಬಳೆ, ಸಿದ್ರಾಮ ದಾನಾ, ಉಮಾಕಾಂತ ಮಹಾಜನ, ಶ್ರೀಮಂತ ಮಡಕೆ, ವನಿತಾ ವೆಂಕಟರಾವ ಇತರರಿದ್ದರು.