ಮತ್ತೆ ಶಾಲೆಯತ್ತ ಹೆಜ್ಜೆ ಹಾಕಿದ ಚಿಣ್ಣರು

IMG-20211025-WA0010
Published on

ಮಂಗಳೂರು: ಸುಮಾರು ಒಂದೂವರೆ ವರ್ಷದ ಬಳಿಕ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 1ರಿಂದ 5ನೇ ತರಗತಿ ಮಕ್ಕಳು ಮತ್ತೆ ಶಾಲೆಯತ್ತ ಹೆಜ್ಜೆ ಹಾಕಿದ್ದಾರೆ. ಸೋಮವಾರ ಮುಂಜಾನೆ ಬಸ್ ನಿಲ್ದಾಣ, ತಂಗುದಾಣ, ಶಾಲಾ ಆವರಣ, ರಸ್ತೆ ಸೇರಿದಂತೆ ಎಲ್ಲೆಡೆ ಮಕ್ಕಳ ಕಲರವ ಕಾಣಿಸಿದೆ. ಜಿಲ್ಲೆಯಲ್ಲಿ 1ರಿಂದ 5ನೇ ತರಗತಿ‌ ವರೆಗಿನ 1,57,563 ಮಕ್ಕಳಿದ್ದು, ಮೊದಲ ದಿನ ಶಾಲೆಗೆ ಆಗಮಿಸಿದ್ದಾರೆ. ಹಾಜರಾತಿ ಕಡ್ಡಾಯ ಇಲ್ಲದಿರುವುದರಿಂದ ಎಷ್ಟು ಮಕ್ಕಳು ಹಾಜರಾಗಿದ್ದಾರೆ ಎನ್ನುವುದು ಇನ್ನಷ್ಟೇ ತಿಳಿದು ಬರಬೇಕಾಗಿದೆ. ಈ ನಡುವೆ ಶನಿವಾರವೇ ಶಾಲಾ ಕೊಠಡಿಗಳು ಸೇರಿದಂತೆ ಆವರಣವನ್ನು ಸ್ಯಾನಿಟೈಸ್ ಮಾಡಿ ಇಡಲಾಗಿತ್ತು. ಸೋಮವಾರ ಮುಂಜಾನೆ ಎಂದಿಗಿಂತ ಬೇಗ ಆಗಮಿಸಿದ ಶಿಕ್ಷಕರು ಶಾಲೆಯ ಪ್ರವೇಶ ದ್ವಾರ ಸೇರಿದಂತೆ ಕೊಠಡಿಗಳನ್ನು ಅಲಂಕರಿಸಿ, ಮಕ್ಕಳ ಸ್ವಾಗತಕ್ಕೆ ವ್ಯವಸ್ಥೆ ಮಾಡಿದರು. ಹಲವು ತಿಂಗಳ ಬಳಿಕ ಮಕ್ಕಳನ್ನು ನೇರವಾಗಿ ನೋಡುತ್ತಿರುವುದರಿಂದ ಶಿಕ್ಷಕರೂ ಉತ್ಸುಕರಾಗಿದ್ದುದು ಕಂಡು ಬಂತು. ಕೆಲವು ಶಾಲೆಗಳಲ್ಲಿ ಸಿಹಿತಿಂಡಿ, ಚಾಕ್ಲೆಟ್ ನೀಡಿ ಮಕ್ಕಳನ್ನು ಸ್ವಾಗತಿಸಿದರು. ಹೆತ್ತವರು ಮಕ್ಕಳನ್ನು ಶಾಲೆಗೆ ಬಿಟ್ಟು ತೆರಳಿದ್ದಾರೆ. ದಿನಬಿಟ್ಟು ದಿನ ವಾರದಲ್ಲಿ ಮೂರು ದಿನ ಮಧ್ಯಾಹ್ನದ ವರೆಗೆ ತರಗತಿಗಳು ನಡೆಯಲಿವೆ.‌ ನವೆಂಬರ್‌ 2ರಿಂದ ಇಡೀ ದಿನ‌ ತರಗತಿ ಇರಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net