

ಜಗಳೂರು: ಪ್ರಾಥಮಿಕ ಶಾಲೆಗಳ ಪದವೀಧರ ಶಿಕ್ಷಕರಿಗೆ ಪ್ರೌಢಶಾಲೆಗಳ ಬಡ್ತಿ ಮತ್ತು ವರ್ಗಾವಣೆ ವಿಷಯದಲ್ಲಿ ಆಗುತ್ತಿರುವ ಅನ್ಯಾಯ ಸರಿಪಡಿಸುವಂತೆ ಶನಿವಾರ ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರ ಸಂಘದಿಂದ ಪ್ರಭಾರ ಬಿಇಒ ಸುರೇಶ್ ಅವರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಪ್ರಾ.ಶಾ. ಶಿಕ್ಷಕರ ಸಂಘದ ತಾಲೂಕಾಧ್ಯಕ್ಷ ಬಿ.ಎಂ. ಹನುಮಂತೇಶ್ ಮಾತನಾಡಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಾರ್ವತ್ರಿಕ ವರ್ಗಾವಣೆ ಈಗಾಗಲೇ ಆರಂಭವಾಗಿದೆ. ಇದರಲ್ಲಿ ಸುಮಾರು 25 ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿರುವ ಪಿಎಸ್‌ಟಿ ಶಿಕ್ಷಕರಿಗೆ ಅನ್ಯಾಯವಾಗಿದೆ. ಶೇ.90ರಷ್ಟು ಕರ್ತವ್ಯ ನಿರ್ವಹಿಸಿರುವ ಪಿಎಸ್‌ಟಿ ಶಿಕ್ಷಕರಿಗೆ ಕೇವಲ ಶೇ. 10ರಷ್ಟು ಖಾಲಿ ಹುದ್ದೆ ತೋರಿಸಲಾಗಿದೆ. ಇನ್ನುಳಿದ ಎಲ್ಲ ಹುದ್ದೆಗಳಿಗೆ ಜಿಪಿಟಿ ಶಿಕ್ಷಕರಿಗೆ ಕಾಯ್ದಿರಿಸಲಾಗಿದೆ. ಇದರಿಂದ ಪಿಎಸ್‌ಟಿ ಶಿಕ್ಷಕರಿಗೆ ವರ್ಗಾವಣೆಯಲ್ಲಿ ಸ್ಥಳಗಳು ಸಿಗದಂತಾಗಿದೆ. ಆದ್ದರಿಂದ ಈ ಅನ್ಯಾಯ ಸರಿಪಡಿಸಬೇಕು ಎಂದು ಒತ್ತಾಯಿಸಿದರು.
ಸಿಆ್ಯಂಡ್‌ಆರ್ ಸಿದ್ದುಪಡಿ ಹಾಗೂ ಪಿಎಸ್‌ಟಿ ಶಿಕ್ಷಕರಿಗೆ ವರ್ಗಾವಣೆಯಲ್ಲಿ ಆಗುತ್ತಿರುವ ಸಮಸ್ಯೆ ಸರಿಪಡಿಸದಿದ್ದರೆ ಮುಂದಿನ ದಿನಗಳಲ್ಲಿ 6 ರಿಂದ 8 ನೇ ತರಗತಿ ಪಾಠ ಬೋಧನೆ ಬಹಿಷ್ಕರಿಸಲಾಗುವುದು ಎಂದು ಎಚ್ಚರಿಕೆ ನಿಡಿದರು.
ಪ್ರಾ.ಶಾ ಪದವೀಧರರ ಸಂಘದ ಅಧ್ಯಕ್ಷ ಎಚ್. ರಾಜ್‌ಕೋಟಿ, ಕಾರ್ಯದರ್ಶಿಗಳಾದ ಆಂಜನೇಯ ನಾಯ್ಕ, ಎಂ.ಕೆ. ಪ್ರಕಾಶ್, ಪದಾಧಿಕಾರಿಗಳಾದ ಕೆ.ಜಿ. ಶ್ರೀದೇವಿ, ಎಚ್. ನಾಗರತ್ನಮ್ಮ, ಎಂ. ಪ್ರಕಾಶ್, ಸಹಕಾರ್ಯದರ್ಶಿ ಇ. ಸತೀಶ್, ಜಂಬುನಾಥ್, ಎಲ್. ಈರಪ್ಪ, ನಾಗರಾಜ್, ಕೆ.ಆರ್. ವೀರೇಶ್ ಮತ್ತಿತರರಿದ್ದರು.