

ಶಿರಸಿ: ತಾಲೂಕಿನ ಬನವಾಸಿಯ ಪ್ರಾಥಮಿಕ ಆರೋಗ್ಯ ಕೇಂದ್ರ ಸೋರುತ್ತಿರುವ ಹಿನ್ನೆಲೆಯಲ್ಲಿ ಉಪವಿಭಾಗಾಧಿಕಾರಿ ಕಾವ್ಯಾರಾಣಿ ಮಂಗಳವಾರ ಭೇಟಿ ನೀಡಿ ಪರಿಶೀಲಿಸಿದರು.
ಈ ವೇಳೆ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಜಯಶ್ರೀ ಹೆಗಡೆ ಕಟ್ಟಡ ಸೋರುತ್ತಿರುವುದನ್ನು ತೋರಿಸಿ ವಿವರಿಸಿದರು. ಆಸ್ಪತ್ರೆಯ ಸಂಪೂರ್ಣ ಮೇಲ್ಚಾವಣಿ, ವೈದ್ಯಕೀಯ ಸಿಬ್ಬಂದಿ ವಸತಿ ಗೃಹಗಳು ದುರಸ್ತಿಯಲ್ಲಿರುವ ಬಗ್ಗೆ ಮಾಹಿತಿ ಪಡೆದು ಕೂಡಲೇ ಕಟ್ಟಡ ದುರಸ್ತಿ ಪ್ರಾರಂಭಗೊಳಿಸುವ ಕುರಿತು ಸೂಚನೆ ನೀಡಿದರು. ಈ ವೇಳೆ ತಹಸೀಲ್ದಾರ್ ಶ್ರೀಧರ ಮುಂದಲಮನಿ ಇದ್ದರು.
ಕಳೆದ ಎರಡು ದಿನಗಳಿಂದ ತಗ್ಗಿದ್ದ ಮಳೆಯ ಪ್ರಮಾಣ ಸೋಮವಾರ ರಾತ್ರಿಯಿಂದ ಜೋರಾಗಿದೆ. ಇದರಿಂದಾಗಿ ಇಲ್ಲಿಯ ಸೋಂದಾ ಮತ್ತು ಭೈರುಂಬೆ ಪಂಚಾಯಿತಿ ಮಧ್ಯೆ ಇರುವ ದೇವರ ಹೊಳೆ ತುಂಬಿ ಹರಿದಿದೆ. ಇಲ್ಲಿಯ ಸೇತುವೆಯ ಮೇಲೆ ನೀರು ಉಕ್ಕಿ ಹರಿದು ಸಂಚಾರ ವ್ಯತ್ಯಯಗೊಂಡಿತು.
ತಾಲೂಕಿನ ಇಸಳೂರಿನ ಬಸವರಾಜ ಶಂಕ್ರಪ್ಪ ಮಾಳಗಿ ಅವರ ಮನೆಯ ಗೋಡೆ ಕುಸಿದು ಹಾನಿಯಾಗಿದೆ. ದೇವನಳ್ಳಿಯ ಕೆಳಗಿನಕೇರಿ ಗ್ರಾಮದಲ್ಲಿ ಸುಬ್ರಾಯ ನಾರಾಯಣ ಸಿದ್ದಿ ಅವರ ವಾಸ್ತವ್ಯದ ಮನೆಯ ಮೇಲೆ ಅಡಕೆ ಮರ ಮುರಿದುಬಿದ್ದು ಹಾನಿಯಾಗಿದೆ.