

ಕೂಡ್ಲಿಗಿ: ತಾಲೂಕಿನ ಅಲೂರು, ಕಾನಹೊಸಹಳ್ಳಿ ಆಸ್ಪತ್ರೆಗಳಲ್ಲಿ ರಾತ್ರಿ ವೇಳೆ ವೈದ್ಯರು, ಸಿಬ್ಬಂದಿ ಇರುವುದಿಲ್ಲ. ಇದರಿಂದ ಜನರಿಗೆ ತೀವ್ರ ತೊಂದರೆಯಾಗುತ್ತಿದೆ ಎಂದು ತಾಪಂ ಅಧ್ಯಕ್ಷೆ ನಾಗರತ್ನಮ್ಮ ಆರೋಪಿಸಿದರು.
ತಾಪಂ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಈ ಭಾಗದ ಹಳ್ಳಿ ಜನರು ರಾತ್ರಿ ವೇಳೆ ಆಸ್ಪತ್ರೆಗಳಿಗೆ ಬಂದರೆ ವೈದ್ಯರು ಇರಲ್ಲ. ಸಿಬ್ಬಂದಿಯೂ ರಾತ್ರಿ 8ರ ನಂತರ ಮನೆಗೆ ಹೋಗಿರುತ್ತಾರೆ. ತುರ್ತು ಸಂದರ್ಭದಲ್ಲಿ ಮನೆಗೆ ಹೋಗಿ ಕರೆದರೂ ಬರುವುದಿಲ್ಲ. ಇದರಿಂದ ರೋಗಿಗಳು ಪರದಾಡುವಂತಾಗಿದೆ. ಈ ಕುರಿತು ಕ್ರಮಕೈಗೊಳ್ಳಬೇಕು ಎಂದು ಟಿಎಚ್‌ಒ ಡಾ.ಷಣ್ಮುಖ ನಾಯ್ಕಗೆ ಸೂಚಿಸಿದರು.
ಟಿಎಚ್‌ಒ ಷಣ್ಮುಖನಾಯ್ಕ ಪ್ರತಿಕ್ರಿಯಿಸಿ, ಸರಿಯಾಗಿ ಕೆಲಸ ಮಾಡುವಂತೆ ಸಿಬ್ಬಂದಿಗೆ ಈಗಾಗಲೇ ತಿಳಿಸಿದ್ದು, ಮತ್ತೊಮ್ಮೆ ಎಚ್ಚರಿಕೆ ನೀಡಲಾಗುವುದು ಎಂದರು. ಕೊಟ್ಟೂರು ಸೇರಿ ತಾಲೂಕಿನಲ್ಲಿ ಈವರೆಗೆ 73 ಕರೊನಾ ಪ್ರಕರಣಗಳು ಪತ್ತೆಯಾಗಿವೆ. ಸೋಂಕಿತರ ಚಿಕಿತ್ಸೆಗೆ ಕಂದಗಲ್ಲು ಬಳಿಯ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 100 ಹಾಸಿಗೆ ಹಾಗೂ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ 20 ಹಾಸಿಗೆಗಳ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರ. ಇಒ ಜಿ.ಎಂ.ಬಸಣ್ಣ, ಉಪಾಧ್ಯಕ್ಷೆ ರತ್ನಮ್ಮ, ಸ್ಥಾಯಿ ಸಮಿತಿ ಅಧ್ಯಕ್ಷ ಎಸ್.ನಾಗರಾಜ ಇದ್ದರು.