

ಹೊನ್ನಾವರ: ವ್ಯಕ್ತಿಯ ಜೀವನದಲ್ಲಿ ಪ್ರಾಥಮಿಕ ಶಾಲೆಯ ಶಿಕ್ಷಣವು ಮಹತ್ವವಾದ ಪಾಠವನ್ನು ಕಲಿಸುತ್ತದೆ. ಪ್ರಾಥಮಿಕ ಹಂತದಲ್ಲಿ ಕಲಿತ ಒಳ್ಳೆಯ ವಿಚಾರಗಳು ಮುಂದಿನ ಜೀವನದಲ್ಲಿ ದಾರಿದೀಪವಾಗುವುದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎಸ್.ನಾಯ್ಕ ಹೇಳಿದರು.
ತಾಲೂಕಿನ ಸಂತೇಗುಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾನುವಾರ ಆಯೋಜಿಸಿದ್ದ ‘ವರುಷದ ಹರುಷ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪಾಲಕರು ತಮ್ಮ ಮಕ್ಕಳ ಚಲನವಲನವನ್ನು ಗಮನಿಸಿ ಮಾರ್ಗದರ್ಶನ ಮಾಡಬೇಕು. ಟಿವಿ ಮತ್ತು ಮೊಬೈಲ್ ಫೋನ್ ಗಳಿಗೆ ಹೆಚ್ಚು ಸಮಯ ಹಾಳು ಮಾಡದೇ ಮಕ್ಕಳ ಬಗ್ಗೆ ಗಮನ ಹರಿಸಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಗ್ರಾ.ಪಂ.ಅಧ್ಯಕ್ಷ ಸುರೇಶ ಶೆಟ್ಟಿ ಮಾತನಾಡಿ, ಕನ್ನಡ ಶಾಲೆಗಳು ಉತ್ತಮ ಶಿಕ್ಷಣವನ್ನು ನೀಡುತ್ತದೆ. ಕನ್ನಡ ಶಾಲೆಯಲ್ಲಿ ಕಲಿತವರು ಮಾನವೀಯ ಮೌಲ್ಯಗಳನ್ನು ಹೊಂದಿರುತ್ತಾರೆ. ಶಾಲೆಯ ಅಭಿವೃದ್ಧಿಗೆ ಸಹಕಾರ ನೀಡಲಾಗುವುದು ಎಂದರು.
ಗ್ರಾ.ಪಂ.ಸದಸ್ಯರಾದ ಎಚ್.ಆರ್.ಗಣೇಶ, ಕಿರಣ ಹೆಗಡೆ ಮಾತನಾಡಿದರು.
ವಿದ್ಯಾರ್ಥಿಗಳ ‘ಚಂದನದ ಚಿಗುರು’ ಹಸ್ತಪತ್ರಿಕೆಯನ್ನು ಶಿಕ್ಷಣ ಸಂಯೋಜಕ ಪ್ರಮೋದ ನಾಯ್ಕ ಬಿಡುಗಡೆಗೊಳಿಸಿದರು. ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಎಂ.ಜಿ.ನಾಯ್ಕ, ಜಿಲ್ಲಾ ಗೌರವಾಧ್ಯಕ್ಷ ಸುಧೀಶ ನಾಯ್ಕ, ಸಿಆರ್‌ಪಿ ಈಶ್ವರ ಭಟ್ಟ, ಗ್ರಾ.ಪಂ. ಸದಸ್ಯೆ ಗೀತಾ ಹೆಗಡೆ, ಉದ್ಯಮಿ ಜಿ.ಎಸ್.ಹೆಗಡೆ ಉಪಸ್ಥಿತರಿದ್ದರು. ಮುಖ್ಯಾಧ್ಯಾಪಕ ಐ.ಆರ್.ಭಟ್ಟ ಸ್ವಾಗತಿಸಿದರು. ಮಹಾಬಲೇಶ್ವರ ಹೆಗಡೆ ವಂದಿಸಿದರು. ಸ್ವೀಕೃತಿ ಭಟ್ ನಿರ್ವಹಿಸಿದರು.