

ಸವಣೂರ: ಮಕ್ಕಳಿಗೆ ಪ್ರಾಥಮಿಕ ಹಂತದಲ್ಲಿ ನೀಡುವ ಶಿಕ್ಷಣವೇ ಉತ್ತಮ ರಾಷ್ಟ್ರ ನಿರ್ಮಾಣಕ್ಕೆ ಅಡಿಪಾಯವಾಗಲಿದೆ ಎಂದು ಗಂಗಾವತಿ ಕಲ್ಮಠದ ಡಾ. ಕೊಟ್ಟೂರ ಸ್ವಾಮೀಜಿ ಹೇಳಿದರು.
ಜಿಪಂ, ತಾಪಂ, ಶಿಕ್ಷಣ ಇಲಾಖೆ, ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ ಹಾಗೂ ವಿವಿಧ ಶಿಕ್ಷಕರ ಸಂಘಟನೆಯ ಸಹಯೋಗದಲ್ಲಿ ಪಟ್ಟಣದ ಶ್ರೀ ಚನ್ನಬಸವೇಶ್ವರ ಮಂಗಲ ಭವನದಲ್ಲಿ ಶನಿವಾರ ಏರ್ಪಡಿಸಿದ್ದ ಶಿಕ್ಷಕರ ದಿನಾಚರಣೆ ಹಾಗೂ ನಿವೃತ್ತ ಶಿಕ್ಷಕರ ಸನ್ಮಾನ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಪ್ರತಿ ಮನುಷ್ಯನ ನೆನೆಪಿನ ಅಂಗಳದಲ್ಲಿ ಉಳಿಯುವ ವ್ಯಕ್ತಿ ಪ್ರಾಥಮಿಕ ಶಿಕ್ಷಣ ನೀಡಿದ ಶಿಕ್ಷಕ. ಓದಿ ಓದಿಸುವ ವ್ಯಕ್ತಿತ್ವ ಬೆಳೆಸಿಕೊಳ್ಳುವ ಶಿಕ್ಷಕ ಮಾತ್ರ ಇಂದಿನ ದಿನಮಾನದಲ್ಲಿ ನಿಜವಾದ ಉತ್ತಮ ಶಿಕ್ಷಕನಾಗಲು ಸಾಧ್ಯ. ಶಿಕ್ಷಣ ಬಲ್ಲದ ವ್ಯಕ್ತಿ ಶಿಕ್ಷಣ ಮಂತ್ರಿಯಾಗುತ್ತಿರುವುದು ರಾಷ್ಟ್ರದ ದುರಂತವಾಗಿದೆ. ಪರಮ ಪವಿತ್ರ ವೃತ್ತಿ ಶಿಕ್ಷಕ ವೃತ್ತಿಯಾಗಿದೆ. ಒತ್ತಡದ ಮಧ್ಯೆ ನಿಷ್ಠೆಯ ಕಾಯಕದೊಂದಿಗೆ ಉತ್ತಮ ಸಮಾಜ ನಿರ್ಮಾಣಕ್ಕೆ ಕೊಡಗೆ ನೀಡಲು ಸರ್ವ ಗುರು ಬಳಗ ಮುಂದಾಗಲಿ ಎಂದರು.
ವಿಧಾನಸಭೆ ಉಪ ಸಭಾಧ್ಯಕ್ಷ ರುದ್ರಪ್ಪ ಲಮಾಣಿ ಸಮಾರಂಭ ಉದ್ಘಾಟಿಸಿ ಮಾತನಾಡಿ, ಸಾರ್ವಜನಿಕರು ಶಿಕ್ಷಕರ ದಿನ ಆಚರಿಸುವಂತಾಗಬೇಕು ಎಂಬ ಮಾತು ಕೇಳಿ ಬರುತ್ತಿರುವುದು ಸಂತಸದ ಸಂಗತಿಯಾಗಿದೆ. ಸವಣೂರಿನಲ್ಲಿ ಗುರು ಭವನ ಇಲ್ಲದಿರುವುದು ವಿಷಾದನೀಯ ಸಂಗತಿಯಾಗಿದೆ. ಹಾವೇರಿ ಸಂಸದರಾದ ಬಸವರಾಜ ಬೊಮ್ಮಾಯಿ ಅವರು ಸ್ಥಳೀಯ ಶಾಸಕರಾಗಿ, ಮುಖ್ಯಮಂತ್ರಿಯಾಗಿದ್ದರು. ಆಗ ಶಿಕ್ಷಕರಿಗೆ ಒಂದು ಭವನ ನಿರ್ಮಾಣಕ್ಕೆ ಸಹಕಾರ ಏಕೆ ನೀಡಲಿಲ್ಲ ಎಂಬುದು ಆಶ್ಚರ್ಯ ತರಿಸಿದೆ. 12 ಗುಂಟೆ ನಿವೇಶನ ಗುರುತಿಸಿ ಗುರುಭವನ ನಿರ್ಮಾಣಕ್ಕೆ ಚಾಲನೆ ನೀಡಲಾಗುವುದು. ಶಿಕ್ಷಕರ ಬೇಡಿಕೆಗಳ ಈಡೇರಿಕೆಗಾಗಿ ಕೈಗೊಳ್ಳುತ್ತಿರುವ ಹೋರಾಟಕ್ಕೆ ಬೆಂಬಲ ನೀಡಲಾಗುವುದು ಎಂದರು.
ನಿವೃತ್ತ ಜಂಟಿ ನಿರ್ದೇಶಕ ಗಜಾನನ ಮನ್ನಿಕೇರಿ ಉಪನ್ಯಾಸ ನೀಡಿದರು. ದೊಡ್ಡಹುಣಸೇಕಲ್ಮಠದ ಶ್ರೀ ಚನ್ನಬಸವ ಸ್ವಾಮೀಜಿ, ಅಡವಿಸ್ವಾಮಿಮಠದ ಶ್ರೀ ಕುಮಾರ ಸ್ವಾಮೀಜಿ ಸಾನ್ನಿಧ್ಯ ಆಶೀರ್ವಚನ ನೀಡಿದರು. ಬಿಇಒ ಎಂ.ಎಫ್. ಬಾರ್ಕಿ ಅಧ್ಯಕ್ಷತೆ ವಹಿಸಿದ್ದರು. ತಹಸೀಲ್ದಾರ್ ಭರತರಾಜ್ ಕೆ.ಎನ್., ಶಿಕ್ಷಕರ ಸಂಘದ ಜಿಲ್ಲಾ ಕಾರ್ಯದರ್ಶಿ ಬಸವರಾಜ ಚಳ್ಳಾಳ, ವಿವಿಧ ಶಿಕ್ಷಕರ ಸಂಘಗಳ ಅಧ್ಯಕ್ಷರಾದ ಶಿವಯೋಗಿ ಆಲದಕಟ್ಟಿ, ಎನ್.ಕೆ. ಪಾಟೀಲ, ಪಿ.ಎಸ್. ಗುಜ್ಜರ, ಪಿ.ವಿ. ಗುತ್ತಲ, ಕೆ.ಎಸ್. ಗಾಣಗೇರ, ಜಿ.ಎಸ್. ಗುಂಜಳ, ಪಿ.ಬಿ. ಮುಳ್ಳಳ್ಳಿ, ಐ.ಎಸ್. ಮುದಗಲ್ ಇತರರು ಪಾಲ್ಗೊಂಡಿದ್ದರು. ಬಿಆರ್‌ಸಿ ಎಂ.ಎನ್. ಅಡಿವೆಪ್ಪನವರ, ಸಿಆರ್‌ಪಿ ನಾಗರಾಜ ಬಂಡಿವಡ್ಡರ ಹಾಗೂ ಬಿಆರ್‌ಪಿ ಡಿ.ಬಿ. ತೋಟದ ಕಾರ್ಯಕ್ರಮ ನಿರ್ವಹಿಸಿದರು.
ಸೇವೆಯಲ್ಲಿ ಅಕಾಲಿಕವಾಗಿ ಮರಣ ಹೊಂದಿದ ಶಿಕ್ಷಕರಾದ ಸಿ.ಡಿ. ಕುದರಿ, ಎಸ್.ಎಫ್. ಲಕ್ಕನಗೌಡ್ರ ಶಿಕ್ಷಕರಿಗೆ ಗೌರವ ನಮನ ಸಲ್ಲಿಸಲಾಯಿತು.