

ಅರಕಲಗೂಡು: ತಾಲೂಕಿನ ಮದಲಾಪುರ ಗ್ರಾಮದಲ್ಲಿ ಎರಡು ದಿನಗಳ ಕಾಲ ಹಬ್ಬದ ರೀತಿಯಲ್ಲಿ ಆಯೋಜಿಸಿದ್ದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಜ್ರ ಮಹೋತ್ಸವ ಹಾಗೂ ಗುರುವಂದನಾ ಕಾರ್ಯಕ್ರಮ ಭಾನುವಾರ ರಾತ್ರಿ ಸಮಾರೋಪಗೊಂಡಿತು.
ಹಿರಿಯ ವಿದ್ಯಾರ್ಥಿ ಇಂಜಿನಿಯರ್ ಅನಂತನಾಗ್ ಮಾತನಾಡಿ, ಭವಿಷ್ಯದ ಗುರಿ ಸಾಧನೆಗೆ ಪ್ರಾಥಮಿಕ ಶಿಕ್ಷಣ ಭದ್ರಬುನಾದಿಯಾಗಲಿದೆ. ಇದೇ ಶಾಲೆಯಲ್ಲಿ ಕಲಿತ ನನಗೆ ಅಂದಿನ ಶಿಕ್ಷಕಿ ಸುಜಾತಾ ಅವರು ಉತ್ತಮ ಶಿಕ್ಷಣ ನೀಡಿದ್ದರಿಂದ ಈಗ ಉನ್ನತ ಹುದ್ದೆಗೇರಿ ಬದುಕು ಕಟ್ಟಿಕೊಳ್ಳಲು ನೆರವಾಗಿದೆ. ಹೀಗಾಗಿ ಎಲ್ಲ ಮಕ್ಕಳಿಗೂ ಪ್ರಾಥಮಿಕವಾಗಿ ಗುಣಮಟ್ಟದ ಶಿಕ್ಷಣ ಸಿಗಬೇಕು. ಶಾಲೆಯಲ್ಲಿ ಆಚರಿಸಿರುವ ವಜ್ರ ಮಹೋತ್ಸವ ಕಾರ್ಯಕ್ರಮ ಸಂತೋಷ ತಂದಿದ್ದು ಮುಂದೆಯೂ ಇಂತಹ ಕಾರ್ಯಕ್ರಮಗಳಿಗೆ ನಮ್ಮೆಲ್ಲರ ಸಹಕಾರವಿದೆ ಎಂದರು.
ವೀರಶೈವ ಮಹಾಸಭಾ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ್, ಎಎಪಿ ಮುಖಂಡ ಬಿ.ಟಿ. ಜವರೇಗೌಡ, ಕಾಫಿ ಬೆಳೆಗಾರ ಗೇಟ್ ವೆಂಕಟೇಶ್ ಮಾತನಾಡಿದರು. ಮುಖಂಡರಾದ ಅಣ್ಣೇಗೌಡ, ಕಳ್ಳಿಮುದ್ದನಹಳ್ಳಿ ಲೋಕೇಶ್, ರಂಗೇಗೌಡ, ವನಜಾಕ್ಷಿ, ಬಾಗದಾಳು ಕಾಂತರಾಜು, ಕ್ಯಾತನಹಳ್ಳಿ ಗೋವಿಂದರಾಜು, ಶಿವಪ್ಪ, ತಾಳೂರು ಪುನೀತ್, ಮೂರ್ತಿ, ವಜ್ರ ಮಹೋತ್ಸವ ಸಮಿತಿ ಅಧ್ಯಕ್ಷ ಎಂ.ಆರ್. ರಂಗಸ್ವಾಮಿ, ಕಾರ್ಯದರ್ಶಿ ಎಂ.ಆರ್. ಮಂಜುನಾಥ್, ಮುಖ್ಯ ಶಿಕ್ಷಕ ಜಯಕೇಶವ, ಎಸ್‌ಡಿಎಂಸಿ ಅಧ್ಯಕ್ಷ ಮಂಜುನಾಥ್, ಸದಸ್ಯರು, ಗ್ರಾಮಸ್ಥರು ಇದ್ದರು. ಕಾರ್ಯಕ್ರಮಕ್ಕೆ ಸಹಕರಿಸಿದ ಗಣ್ಯರಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.
ನಗೆಗಡಲಲ್ಲಿ ತೇಲಿಸಿದ ನಗೆ ಹಬ್ಬ: ಗಿಚ್ಚಿ ಗಿಲಿಗಿಲಿ ಮತ್ತು ಕಾಮಿಡಿ ಕಿಲಾಡಿಗಳ ಹೆಸರಾಂತ ಕಲಾವಿದರಾದ ಚಂದ್ರಪ್ರಭ, ವಿನೋದ್ ಗೊಬ್ಬರಗಾಲ, ಸಾಗರ್ ತುರುವೇಕೆರೆ ಅವರು ಮೂರು ತಾಸುಗಳ ಕಾಲ ನಗೆ ಹಬ್ಬ ಕಾರ್ಯಕ್ರಮ ನಡೆಸಿ ಜನರನ್ನು ಹೊಟ್ಟೆ ಹುಣ್ಣಾಗುವಂತೆ ನಕ್ಕು ನಗಿಸಿದರು. ಕಾರ್ಯಕ್ರಮದಲ್ಲಿ ಸೇರಿದ್ದ ಅಪಾರ ಜನಸ್ತೋಮ ಚಪ್ಪಾಳೆಗಳ ಸುರಿಮಳೆಗೈದು ಕಲಾವಿದರನ್ನು ಹುರಿದುಂಬಿಸಿದರು.