

ಬೆಳಗಾವಿ: ತಾಲೂಕಿನ ಹಲಗಾ ಗ್ರಾಮದ ಭರತೇಶ ನರ್ಸಿಂಗ್ ಮಹಾವಿದ್ಯಾಲಯದಲ್ಲಿ ಸೆ. 1ರಿಂದ ಕರೊನಾ ಪ್ರಾಥಮಿಕ ಸೋಂಕು ಹೊಂದಿದವರಿಗೆ, ಸೋಂಕಿತರ ಪ್ರಥಮ ಸಂಪರ್ಕಿತ ವ್ಯಕ್ತಿಗಳ ತಪಾಸಣೆಗಾಗಿ ಪ್ರಾಥಮಿಕ ಕೋವಿಡ್ ಉಪಚಾರ ಕೇಂದ್ರ ಕಾರ್ಯಾರಂಭಿಸಲಾಗುವುದು ಎಂದು ಡಾ. ರಮೇಶ ದೊಡ್ಡಣ್ಣವರ ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗಾವಿಯ ಭರತೇಶ ಶಿಕ್ಷಣ ಸಂಸ್ಥೆ, ಜೈನ್ ಇಂಟರ್‌ನ್ಯಾಷನಲ್ ಟ್ರೆಡ್ ಆರ್ಗನೈಜೇಷನ್ ಜಿತೋ, ಆರ್ಥೋ ಆ್ಯಂಡ್ ಟ್ರಾಮಾ ಸೆಂಟರ್ ಹಾಗೂ ಭಾರತೀಯ ಜೈನ ಸಂಘಟನೆ ಆಶ್ರಯದಲ್ಲಿ ಕೋವಿಡ್ ಉಪಚಾರ ಕೇಂದ್ರ ಪ್ರಾರಂಭಿಸಲಾಗುತ್ತಿದೆ ಎಂದರು.
ರಿಯಾಯಿತಿ ದರದಲ್ಲಿ ಚಿಕಿತ್ಸೆ: ಕೆಲವರಲ್ಲಿ ಸೋಂಕಿನ ಲಕ್ಷಣಗಳು ಕಂಡು ಬರದ ಕಾರಣ ಸೋಂಕಿನ ತೀವ್ರತೆ ಬಗ್ಗೆ ಮಾಹಿತಿ ಲಭ್ಯವಾಗುತ್ತಿಲ್ಲ. ಸೋಂಕು ಅಂತಿಮ ಹಂತಕ್ಕೆ ಬಂದ ನಂತರ ನಾಗರಿಕರು ಆಸ್ಪತ್ರೆಗಳಿಗೆ ಅಲೆದಾಡುತ್ತಿರುವುದು ಕಂಡು ಬರುತ್ತಿದೆ. ಕರೊನಾ ಸೋಂಕಿಗೆ ಪ್ರಾಥಮಿಕ ಹಂತದಲ್ಲಿಯೇ ಚಿಕಿತ್ಸೆ ನೀಡುವುದು ಇಂದಿನ ತುರ್ತು ಅಗತ್ಯ. ಈ ಉಪಚಾರ ಕೇಂದ್ರದಲ್ಲಿ ರಿಯಾಯಿತಿ ದರದಲ್ಲಿ ಚಿಕಿತ್ಸೆ ನೀಡಲಾಗುವುದು.
ಈ ಕೇಂದ್ರದಲ್ಲಿ ಎಲ್ಲ ರೀತಿ ತಪಾಸಣೆ ನಡೆಸಲಾಗುತ್ತದೆ. ಸೋಂಕಿತ ವ್ಯಕ್ತಿಯನ್ನು ಆಸ್ಪತ್ರೆ ದಾಖಲಿಸುವ ಅವಶ್ಯಕತೆ ಇಲ್ಲದಿದ್ದಲ್ಲಿ ವ್ಯಕ್ತಿಯ ಬಗ್ಗೆ ತಜ್ಞ ವೈದ್ಯರ ಅಭಿಪ್ರಾಯ ಪಡೆದು ಅವರನ್ನು ಮನೆಗೆ ಕಳುಹಿಸಲಾಗುವುದು. ಉಪಚಾರ ಅವಶ್ಯವಿದ್ದವರಿಗೆ ಯೋಗ್ಯ ಸೇವೆಗಳನ್ನು ನೀಡಲಾಗುವುದು. ಒಂದು ವೇಳೆ ಸೋಂಕಿತರಿಗೆ ಹೆಚ್ಚಿನ ಚಿಕಿತ್ಸೆ ಅವಶ್ಯಕತೆ ಉಂಟಾದರೆ ಕೋವಿಡ್ ಆಸ್ಪತ್ರೆಗೆ ಕಳುಹಿಸಲಾಗುವುದು ಎಂದರು.
ಸಾಮಾಜಿಕ ಜವಾಬ್ದಾರಿ: ಆರ್ಥೋ ಆ್ಯಂಡ್ ಟ್ರಾಮಾ ಸೆಂಟರ್‌ನ ಡಾ. ದೇವೇಗೌಡ ಮಾತನಾಡಿ, ಸಾಮಾನ್ಯ ಜನರಲ್ಲಿ ಕರೊನಾ ಲಕ್ಷಣಗಳು ಕಂಡು ಬರುವುದಿಲ್ಲ. ಆದರೆ, ಈ ಸೋಂಕು ಒಂದು ಬಾರಿ ಮನುಷ್ಯನ ದೇಹದ ಒಳಗೆ ಪುಪ್ಪಸ ಭಾಗಕ್ಕೆ ಅಂಟಿಕೊಂಡ ಮೇಲೆ ಉಸಿರಾಟದ ತೊಂದರೆ ಉಂಟಾಗುತ್ತದೆ. ಅದಕ್ಕಾಗಿ ಸಣ್ಣ ಜ್ವರ, ಕೆಮ್ಮು, ನೆಗಡಿ ಬಂದ ತಕ್ಷಣ ಆಸ್ಪತ್ರೆಗೆ ತೆರಳಿ ಪ್ರಾಥಮಿಕ ಹಂತದ ತಪಾಸಣೆ ಮಾಡಿಕೊಳ್ಳಬಹುದು ಎಂದರು.
ನಗರದ ಗಾಂಧಿಭವನ ಬಳಿಯ ಶ್ರೀ ಆರ್ಥೋ ಟ್ರಾಮಾ ಸೆಂಟರ್‌ನ ಹಿಂಬದಿಯ ಕಟ್ಟಡದಲ್ಲಿ ಸಿಟಿ ಸ್ಕ್ಯಾನ್ ಹಾಗೂ ಭರತೇಶ ಕಾಲೇಜು ಕ್ಯಾಂಪಸ್ ಹಲಗಾದಲ್ಲಿ ಫ್ಲ್ಯೂ ಕ್ಲಿನಿಕ್ ಪ್ರಾರಂಭಿಸಲಾಗಿದೆ. ನುರಿತ ತಜ್ಞರಿಂದ ಸೂಕ್ತ ಮಾರ್ಗದರ್ಶನವಿದ್ದು, ಯಾವುದೇ ಭಯವಿಲ್ಲದೆ ಇಲ್ಲಿ ಚಿಕಿತ್ಸೆ ಪಡೆಯಬಹುದು. ಜನರಲ್ ವಾರ್ಡ್‌ಗೆ ಪ್ರತಿದಿನ ಪ್ರತಿ ಬೆಡ್‌ಗೆ 6,600 ರೂ., ಸೆಮಿ ಪ್ರಾವೈಟ್ ಪ್ರತಿ ದಿನ ಪ್ರತಿ ಬೆಡ್‌ಗೆ 9,900 ರೂ. ನಿಗದಿಪಡಿಸಲಾಗಿದೆ ಎಂದರು.
ಭರತೇಶ ಶಿಕ್ಷಣ ಸಂಸ್ಥೆ ಖಜಾಂಚಿ ಶ್ರೀಪಾಲ ಖೇಮಲಾಪುರೆ, ಜಂಟಿ ಕಾರ್ಯುದರ್ಶಿ ಬಿ.ಎಸ್. ಚೌಗುಲೆ, ನಿರ್ದೇಶಕರಾದ ವಿನೋದ ದೊಡ್ಡಣ್ಣವರ, ಪ್ರಕಾಶ ಉಪಾಧ್ಯೆ, ರಾಜೇಂದ್ರ ರಾಮಗೊಂಡಾ, ಭೂಷಣ ಮಿರ್ಜಿ, ಜಿತೋ ಚೇರ್ಮನ್ ಮನೋಜ ಸಂಚೇತಿ, ವಿಕ್ರಮ ಜೈನ್, ಹೀರಾಚಂದ ಕಲಮನಿ ಇದ್ದರು.