

ಮಂಡ್ಯ: ಅತಿಥಿ ಶಿಕ್ಷಕರನ್ನು ಖಾಯಂ ಮಾಡುವುದಾಗಿ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದ ಕಾಂಗ್ರೆಸ್ ಈಗ ಸರ್ಕಾರ ರಚನೆಯಾದರೂ ತಾನು ನುಡಿದಂತೆ ನಡೆಯದೇ ಅತಿಥಿ ಶಿಕ್ಷಕರಿಗೆ ಅನ್ಯಾಯ ಮಾಡಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಾಲಾ ಅತಿಥಿ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಬಿ.ಎಸ್.ಮಹೇಶ್‌ಕುಮಾರ್ ಬೇಸರ ವ್ಯಕ್ತಪಡಿಸಿದರು.
ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದಂತೆ ಸಾಕಷ್ಟು ಭರವಸೆ ಈಡೇರಿಸಿದ್ದು, ಅತಿಥಿ ಶಿಕ್ಷಕರ ಖಾಯಂ ನೇಮಕ ಮಾಡುವುದಾಗಿ ಹೇಳಿ ದ್ರೋಹ ಬಗೆದಿದೆ. ಗೌರವ ಧನವಾಗಿ ಹಿಂದೆ ಪ್ರಾಥಮಿಕ ಶಾಲೆಗಳ ಅತಿಥಿ ಶಿಕ್ಷಕರಿಗೆ 10 ಸಾವಿರ ರೂ, ಪ್ರೌಢ ಶಾಲೆಯ ಅತಿಥಿ ಶಿಕ್ಷಕರಿಗೆ 10,500 ರೂ ನೀಡಲಾಗುತ್ತಿದೆ. ಪ್ರಸಕ್ತ ಬಜೆಟ್‌ನಲ್ಲಿ ಕ್ರಮವಾಗಿ 12,000 ರೂ ಮತ್ತು 12,500 ರೂ ನೀಡುವುದೆಂದು ೋಷಣೆ ಮಾಡಲಾಗಿದೆ. ಆದರೆ ನಮಗೆ ಗೌರವ ಧನದ ಬದಲಾಗಿ ಕನಿಷ್ಟ ವೇತನದಂತೆ 25 ಸಾವಿರ ರೂ ವೇತನ ನೀಡುವಂತೆ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.
ಅತಿಥಿ ಶಿಕ್ಷಕರನ್ನು ಖಾಯಂ ಮಾಡುವ ಸಲುವಾಗಿ ಸಚಿವರ ಭೇಟಿ, ಪ್ರತಿಭಟನೆ ಹೋರಾಟ, ಗಮನ ಸೆಳೆಯುವ ಕೆಲಸ ಮಾಡಿದರೂ ಪ್ರಯೋಜನವಾಗಿಲ್ಲ. ಶಿಕ್ಷಣ ಸಚಿವರ ಭರವಸೆ ಈಡೇರಿಸುವುದಾಗಿ ಹೇಳಿ ಈಗ ಮೌನ ತಾಳಿದ್ದಾರೆ. ಯಾರ ನಮ್ಮ ಪರ ಧ್ವನಿಯಾಗದೇ ಇದ್ದು, ನಮ್ಮ ಬೇಡಿಕೆಗಳನ್ನು ಈಡೇರಿಸಲು ರಾಜ್ಯ ಸರ್ಕಾರ ಮುಂದಾಗಬೇಕು. ಅಂತೆಯೇ ಅತಿಥಿ ಶಿಕ್ಷಕರ ಆಯ್ಕೆಗೆ ಸೇವಾ ಹಿರಿತನಕ್ಕೆ ಆದ್ಯತೆ, ಶೇ.5ರಷ್ಟು ಕೃಪಾಂಕ, ಸೇವಾ ಪ್ರಮಾಣ ಪತ್ರ ನೀಡುವುದು, ಕನಿಷ್ಟ ಕೂಲಿ 25000 ರೂ ವೇತನ, ಅಂಗವಿಕಲ ಶಿಕ್ಷಕರಿಗೆ ಶೇ.10ರಷ್ಟು ಮೀಸಲಾತಿ, ಖಾಯಂ ಶಿಕ್ಷಕರ ನೇಮಕಾತಿ ವೇಳೆ ಶೇ.50ರಷ್ಟನ್ನು ಅತಿಥಿ ಶಿಕ್ಷಕರಿಗೆ ಮೀಸಲಾತಿ ಸೇರಿದಂತೆ ಇತರೆ ಬೇಡಿಕೆ ಈಡೇರಿಸಬೇಕು ಎಂದು ಆಗ್ರಹಿಸಿದರು.
ಉಪಾಧ್ಯಕ್ಷ ಜೆ.ಶಿವಕುಮಾರ್, ಪ್ರಧಾನ ಕಾರ್ಯದರ್ಶಿ ಕೆಂಪರಾಜು, ಯು.ಪ್ರಭು, ವಿಜಯ್ ಇದ್ದರು.