

ಕೋಲಾರ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ (ಪಿಎಸಿಎಸ್)ಗಳ ಸಂಪೂರ್ಣ ಗಣಕೀಕರಣ ಜಾರಿಗೊಳಿಸುತ್ತಿರುವ ಸಹಕಾರಿ ಬ್ಯಾಂಕ್ಗಳಲ್ಲಿ ಕೋಲಾರ, ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ದಕ್ಷಿಣ ಭಾರತದಲ್ಲೇ ಪ್ರಥಮ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, ಜನವರಿ 1ರಿಂದ ಗ್ರಾಹಕ ಸೇವೆಗೆ ಲೋಕಾರ್ಪಣೆಯಾಗಲಿದೆ ಎಂದು ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಹೇಳಿದರು.
ನಗರದ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘಗಳ ಗಣಕೀಕರಣದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ದೇಶದ ಸಹಕಾರ ಬ್ಯಾಂಕ್ಗಳಲ್ಲಿ ಒಡಿಶಾ ರಾಜ್ಯ ಹೊರತುಪಡಿಸಿದರೆ ದೇಶದಲ್ಲೇ ಪತ್ತಿನ ಸಹಕಾರ ಸಂಘಗಳ ಗಣಕೀಕರಣದ ಸಾಹಸಕ್ಕೆ ಕೈಹಾಕಿರುವ ಮೊದಲ ಬ್ಯಾಂಕ್ ನಮ್ಮದು ಎಂದು ಹರ್ಷ ವ್ಯಕ್ತಪಡಿಸಿದರು.
ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ 191 ಪ್ಯಾಕ್ಸ್ಗಳ ಸಂಪೂರ್ಣ ಮಾಹಿತಿ ಗಣಕೀಕರಣಗೊಂಡು ಡಿಸಿಸಿ ಬ್ಯಾಂಕ್ ಮಾದರಿಯಾಗಲಿದೆ ಎಂದರು.
ಕಡತಗಳಿಂದ ಕಂಪ್ಯೂಟರೀಕರಣಗೊಳಿಸುವ ಮುನ್ನ ಕೂಲಂಕಷವಾಗಿ ಪರಿಶೀಲಿಸಬೇಕು. ಅವಶ್ಯವಿರುವ ಹೆಚ್ಚುವರಿ ಸಿಬ್ಬಂದಿಯನ್ನು ತಾತ್ಕಾಲಿಕವಾಗಿ ನೇಮಿಸಿಕೊಂಡು ಗಣಕೀರಣ ಕಾರ್ಯ ಪೂರ್ಣಗೊಳಿಸಬೇಕು. ಜನವರಿಯಲ್ಲಿ ಪರಿಪೂರ್ಣ ಆನ್ಲೈನ್ ಬ್ಯಾಂಕಿಂಗ್ ವ್ಯವಸ್ಥೆಯೊಂದಿಗೆ ಮೈಕ್ರೋ ಎಟಿಎಂ ಸೇವೆಯೂ ಲಭ್ಯವಾಗಲಿದೆ ಎಂದರು.
ಬ್ಯಾಂಕ್ ಎಜಿಎಂ ಶಿವಕುಮಾರ್ ಮಾತನಾಡಿ, ಜಿಲ್ಲೆಯ 86, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 105 ಪ್ಯಾಕ್ಸ್ಗಳು ಸೇರಿ ಒಟ್ಟು 191 ಮೈಗ್ರೇಷ್ನ್ ಹೊಂದಿವೆ. ಕೋಲಾರ ಜಿಲ್ಲೆಯಲ್ಲಿ 82 ಮತ್ತು ಚಿಕ್ಕಬಳ್ಳಾಪುರದಲ್ಲಿ 97 ಪ್ಯಾಕ್ಸ್ಗಳು ಸೇರಿ ಒಟ್ಟು 179 ಗಣಕೀಕರಣ ಮುಗಿದಿದೆ. ಕೋಲಾರದಲ್ಲಿ 4 ಮತ್ತು ಚಿಕ್ಕಬಳ್ಳಾಪುರದಲ್ಲಿ 8 ಪ್ಯಾಕ್ಸ್ಗಳ ಗಣಕೀಕರಣ ಅಂತಿಮ ಹಂತದಲ್ಲಿದೆ ಎಂದು ಮಾಹಿತಿ ನೀಡಿದರು.
ಬ್ಯಾಂಕ್ನ ಎನ್ಪಿಎ ಕಡಿಮೆ ಮಾಡುವುದು ಠೇವಣಿ ಹೆಚ್ಚಳ ಮಾಡುವುದು ನಮ್ಮ ಗುರಿಯಾಗಿದೆ. ಪ್ರತಿ ಮಹಿಳಾ ಸ್ವಸಹಾಯ ಸಂಘದ ಸದಸ್ಯರಿಗೆೆ ಪ್ರತ್ಯೇಕವಾದ ಪಾಸ್ ಪುಸ್ತಕ ವಿತರಿಸಬೇಕು. ಜನರ ಬಳಿ ಪ್ರೀತಿ ಮತ್ತು ವಿಶ್ವಾಸದಿಂದ ಹೋದಾಗ ಮಾತ್ರ ಎಲ್ಲ ಕೆಲಸಗಳನ್ನು ಸೂಸೂತ್ರವಾಗಿ ನಿರ್ವಹಿಸಲು ಸಾಧ್ಯವಾಗುತ್ತದೆ ಎಂದು ಬ್ಯಾಂಕ್ ಅಧಿಕಾರಿಗಳಿಗೆ ಕಿವಿಮಾತು ಹೇಳಿದರು.
ಸಹಕಾರ ಸಂಘಗಳ ಉಪನಿಬಂಧಕ ಸಿದ್ದನಗೌಡ ನೀಲಪ್ಪನವರ್, ಸಹಕಾರ ಸಂಘಗಳ ಲೆಕ್ಕ ಪರಿಶೋಧನಾ ಇಲಾಖೆ ಉಪನಿಬಂಧಕ ಜಿ.ಬಿ.ಶಾಂತಕುಮಾರಿ, ಸಿಬ್ಬಂದಿ ವಾಸುದೇವ್, ನಾಗೇಶ್, ವಿಶ್ವಪ್ರಸಾದ್, ಫರ್ನಾಂಡೀಸ್ ಮತ್ತಿತರರಿದ್ದರು.