ಶ್ರೀರಂಗಪಟ್ಟಣ: ಸರ್ಕಾರದ ಮುಜರಾಯಿ ಇಲಾಖೆ ಸುಪರ್ದಿಯಲ್ಲಿರುವ ದೇಗುಲಗಳ ಅರ್ಚಕರ ತಸ್ತೀಕ್ ಹಣವನ್ನು ನೇರವಾಗಿ ಅವರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲು ಪ್ರತ್ಯೇಕ ಆ್ಯಪ್ ಸಿದ್ಧಪಡಿಸಲಾಗಿದ್ದು, ತಿಂಗಳೊಳಗಾಗಿ ಈ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು ಎಂದು ಮುಜರಾಯಿ ಸಚಿವ ರಾಮಲಿಂಗರೆಡ್ಡಿ ತಿಳಿಸಿದರು.
ತಾಲೂಕಿನ ಆರತಿಉಕ್ಕಡ ದೇವಾಲಯಕ್ಕೆ ಸೋಮವಾರ ಅವರು ಭೇಟಿ ನೀಡಿ ದೇವರ ದರ್ಶನ ಬಳಿಕ ಮಾತನಾಡಿ, ತಾಂತ್ರಿಕ ಸಮಸ್ಯೆಗೆ ಕಾರಣ ಅರ್ಚಕರಿಗೆ ನೀಡುವ ಗೌರವಧನಕ್ಕೆ ತಡವಾಗಿದೆ. ಶೀಘ್ರದಲ್ಲೇ ಅದು ನೇರವಾಗಿ ಅವರ ಖಾತೆಗೆ ಸೇರಲಿದೆ. ಸರ್ಕಾರಕ್ಕೆ ಒಳಪಟ್ಟ ದೇವಾಲಯದ ನೌಕರ ಹಾಗೂ ಅರ್ಚಕ ತೀರಿಕೊಂಡರೆ ಪರಿಹಾರವಾಗಿ ಈ ಹಿಂದೆ ನೀಡುತ್ತಿದ್ದ 35 ಸಾವಿರ ರೂ.ಗಳನ್ನು 2 ಲಕ್ಷ ರೂ.ಗೆ ಹೆಚ್ಚಿಸಲಾಗಿದೆ. ಜತೆಗೆ ಅರ್ಚಕರು ಮತ್ತು ನೌಕರರ ಮಕ್ಕಳಿಗೆ ಶಿಷ್ಯವೇತನ ನೀಡಲಾಗುತ್ತಿದ್ದು, ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿದ ಒಂದು ತಿಂಗಳ ಒಳಗಾಗಿ ಹಣ ಬಿಡುಗಡೆಯಾಗಲಿದೆ. ರೇಣುಕಾದೇವಿ ಎಲ್ಲಮ್ಮ ಗುಡ್ಡ, ಘಾಟಿ ಸುಬ್ರಮಣ್ಯ ಹಾಗೂ ಹುಲಿಗೆಮ್ಮ ದೇಗುಲಗಳಿಗೆ ಲಕ್ಷ ಲಕ್ಷ ಭಕ್ತರು ವರ್ಷದಲ್ಲಿ ಭೇಟಿ ನೀಡುವ ಹಿನ್ನೆಲೆಯಲ್ಲಿ ಇವುಗಳನ್ನು ಸಹ ಮಲೆ ಮಹದೇಶ್ವರ ಬೆಟ್ಟ ದೇಗುಲ ಮಾದರಿಯಲ್ಲಿ ಅಭಿವೃದ್ಧಿಪಡಿಸುವ ಉದ್ದೇಶದಿಂದ ಪ್ರಾಧಿಕಾರ ರಚಿಸಲಾಗಿದೆ. ಮೈಸೂರು ರಾಜವಂಶಸ್ಥರು ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದ ಕಾರಣ ಚಾಮುಂಡಿಬೆಟ್ಟ ಪ್ರಾಧಿಕಾರ ನಿರ್ಮಾಣಕ್ಕೆ ಸಮಸ್ಯೆ ಎದುರಾಗಿತ್ತು. ಆದರೆ ತಡೆಯಾಜ್ಞೆ ತೆರವಾಗಿದ್ದು, ಇದು ಸಹ ಅಭಿವೃದ್ಧಿಗೆ ಒಳಗಾಗಲಿದೆ. ಶ್ರೀರಂಗಪಟ್ಟಣ ತಾಲೂಕಿನ ಆರತಿ ಉಕ್ಕಡ ಅಹಲ್ಯದೇವಿ ಹಾಗೂ ನಿಮಿಷಾಂಬ ದೇವಾಲಯಗಳಲ್ಲೂ ಸಾಕಷ್ಟು ಅಭಿವೃದ್ಧಿ ಕೈಗೊಳ್ಳಲಾಗುವುದು ಎಂದರು.