

ಮಡಿಕೇರಿ: ಎಲ್ಲಾ ಸಮುದಾಯಗಳ ಕಷ್ಟ ಸುಖಗಳಲ್ಲೂ ಕಾಳಜಿಯಿಂದ ಸ್ಪಂದಿಸುವ ಪುರೋಹಿತರು ಅತ್ಯಂತ ಸಂಕಷ್ಟದಲ್ಲಿ ತಮ್ಮ ಬದುಕನ್ನು ಸಾಗಿಸುತ್ತಿದ್ದಾರೆ ಎಂದು ಅಖಿಲ ಭಾರತ ಪುರೋಹಿತ ಕಾರ್ಮಿಕರ ಫೆಡರೇಶನ್‌ನ ರಾಜ್ಯ ಘಟಕದ ಅಧ್ಯಕ್ಷ ಡಾ.ಜೆ.ಶ್ರೀನಿವಾಸ ಮೂರ್ತಿ ತಿಳಿಸಿದರು.
ಸೋಮವಾರಪೇಟೆಯ ಸೋಮೇಶ್ವರ ದೇವಾಲಯದ ಸಭಾಂಗಣದಲ್ಲಿ ಅಖಿಲ ಭಾರತ ಪುರೋಹಿತ ಕಾರ್ಮಿಕರ ಫೆಡರೇಶನ್‌ನ ಕೊಡಗು ಜಿಲ್ಲಾ ಶಾಖೆಯನ್ನು ಇತ್ತೀಚೆಗೆ ಉದ್ಘಾಟಿಸಿ ಅವರು ಮಾತನಾಡಿದರು.
ವಿವಿಧ ದೇವಾಲಯಗಳಲ್ಲಿ ದುಡಿಯುತ್ತಿರುವ ಪುರೋಹಿತರಿಗೆ ಉದ್ಯೋಗ ಭದ್ರತೆಯಾಗಲಿ, ಆರೋಗ್ಯ ವಿಮಾ ಸೌಲಭ್ಯವಾಗಲಿ, ಭವಿಷ್ಯನಿಧಿ ಯೋಜನೆಯಾಗಲಿ ಯಾವುದೂ ಇಲ್ಲದೆ ಅಮಾನವೀಯವಾಗಿ ದುಡಿಸಿಕೊಳ್ಳಲಾಗುತ್ತಿದೆ. ಈ ಎಲ್ಲಾ ಅಸಹಾಯಕ ಪರಿಸ್ಥಿತಿಯಿಂದ ಪುರೋಹಿತ ಕಾರ್ಮಿಕರನ್ನು ವಿಮುಕ್ತಿಗೊಳಿಸುವ ಉದ್ದೇಶದಿಂದ ಸಂಘಟನೆಯ ಆರಂಭಕ್ಕೆ ನಾಂದಿ ಹಾಡಲಾಗಿದೆ. ಆರಂಭಿಕವಾಗಿ ೩೫ಕ್ಕೂ ಅಧಿಕ ಅರ್ಚಕ ವರ್ಗದವರು ಸದಸ್ಯರಾಗಿ ನೋಂದಣಿ ಮಾಡಿಕೊಂಡಿದ್ದಾರೆ. ಇವರುಗಳಲ್ಲೇ ಪದಾಧಿಕಾರಿಗಳನ್ನು ಆಯ್ಕೆ ಮಾಡಿ ಜಿಲ್ಲಾ ಘಟಕವನ್ನು ಅಸ್ತಿತ್ವಕ್ಕೆ ತರಲಾಗಿದೆ. ಮುಂದಿನ ದಿನಗಳಲ್ಲಿ ತಾಲ್ಲೂಕು ಮಟ್ಟದ ಸಮಿತಿಯನ್ನು ಅಸ್ತಿತ್ವಕ್ಕೆ ತರಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಘಟಕದ ಅಧ್ಯಕ್ಷ ಡಾ.ಎಂ.ಬಿ.ಅನಂತಮೂರ್ತಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಪ್ರಹ್ಲಾದ, ಕೊಡಗು ಜಿಲ್ಲಾಧ್ಯಕ್ಷ ಪ್ರಸನ್ನ ಭಟ್ ಉಪಸ್ಥಿತರಿದ್ದರು.
ಪದಾಧಿಕಾರಿಗಳ ನೇಮಕ: ಜಿಲ್ಲಾ ಸಮಿತಿ ಅಧ್ಯಕ್ಷರಾಗಿ ಪ್ರಸನ್ನ ಭಟ್, ಉಪಾಧ್ಯಕರಾಗಿ ಶನಿವಾರಸಂತೆಯ ಸುದರ್ಶನ, ಖಜಾಂಚಿಯಾಗಿ ಎಸಳೂರು ಉದಯಕುಮಾರ್, ಕಾರ್ಯದರ್ಶಿಗಳಾಗಿ ರವಿಕುಮಾರ್, ಪ್ರಸಾದ್ ಹಾಗೂ ಜಯಂತ್ ಆಯ್ಕೆಯಾದರು.