ಫೆ.7ರಂದು ಅರ್ಚಕರು, ಆಗಮಿಕರ ಸಮಾವೇಶ: ಸಂಘದ ರಾಜ್ಯಾಧ್ಯಕ್ಷ ಎಂ.ಎಸ್.ವೆಂಕಟಾಚಲಯ್ಯ ಮಾಹಿತಿ

Priests And Agamikars Association of State Religious Endowment Temples press conference mandya
Published on

ಮಂಡ್ಯ: ಅಖಿಲ ಕರ್ನಾಟಕ ಹಿಂದು ದೇವಾಲಯಗಳ ಅರ್ಚಕರು-ಆಗಮಿಕರ ಮತ್ತು ಉಪಾಧಿವಂತರ ಒಕ್ಕೂಟ, ರಾಜ್ಯ ಧಾರ್ಮಿಕ ದತ್ತಿ ದೇವಾಲಯಗಳ ಅರ್ಚಕರ, ಆಗಮಿಕರ ಸಂಘದ ವತಿಯಿಂದ ಫೆ.7ರಂದು ಬೆಳಗ್ಗೆ 10 ಗಂಟೆಗೆ ಬೆಂಗಳೂರಿನ ಪುರಭವನ(ಟೌನ್ ಹಾಲ್)ದಲ್ಲಿ ರಾಜ್ಯಮಟ್ಟದ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ರಾಜ್ಯಾಧ್ಯಕ್ಷ ಎಂ.ಎಸ್.ವೆಂಕಟಾಚಲಯ್ಯ ತಿಳಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮುಜರಾಯಿ ಸಚಿವ ದಿನೇಶ್ ಗುಂಡೂರಾವ್ ಭಾಗವಹಿಸಲಿದ್ದಾರೆ. ರಾಜ್ಯದಲ್ಲಿ 205 ಎ ಶ್ರೇಣಿ, 193 ಬಿ ಶ್ರೇಣಿ ಹಾಗೂ 36,217 ಸಿ ಶ್ರೇಣಿ ದೇವಾಲಯಗಳಿವೆ. ಈ ಪೈಕಿ ಎ ಮತ್ತು ಬಿ ಶ್ರೇಣಿ ದೇವಾಲಯಗಳಲ್ಲಿ ಆದಾಯ ಉತ್ತಮವಾಗಿದೆ. ಆದರೆ ಸಿ ಶ್ರೇಣಿ ದೇವಾಲಯದಲ್ಲಿ ಆದಾಯವಿಲ್ಲದೆ ಕನಿಷ್ಟ ಪೂಜಾ ಕೈಂಕರ್ಯ ಮಾಡಲು ತೊಂದರೆಯಾಗಿದೆ. ಈ ಬಗ್ಗೆ ಸರ್ಕಾರದ ಗಮನ ಸೆಳೆದ ಕಾರಣ ತಸ್ತಿಕ್ ರೂಪದಲ್ಲಿ ಪ್ರತಿ ದೇವಾಲಯಕ್ಕೆ ಮಾಹೆಯಾನ 5 ಸಾವಿರ ರೂಗಳನ್ನು ನೀಡುತ್ತಿದೆ. ಇದು ಏನೇನೂ ಸಾಲುವುದಿಲ್ಲ. ಆದರೂ ನಾವು ನಿರ್ವಹಣೆ ಮಾಡಿಕೊಂಡು ಬರುತ್ತಿದ್ದೇವೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಬೇಸರ ವ್ಯಕ್ತಪಡಿಸಿದರು.

ಎ ಮತ್ತು ಬಿ ದರ್ಜೆ ದೇವಾಲಯಗಳಲ್ಲಿರುವ ಬರುವ ಆದಾಯದ ಶೇ.35ರಷ್ಟು ಭಾಗವನ್ನು ಅರ್ಚಕರು ಮತ್ತು ನೌಕರರ ವೇತನಕ್ಕೆ ವಿನಿಯೋಗಿಸಲಾಗುತ್ತಿದೆ. ಆದರೆ ನಮಗೆ ಯಾವುದೇ ಆದಾಯವೂ ಇಲ್ಲವಾಗಿದೆ. ಹಿಂದೆಲ್ಲ ರೈತರು ಬೆಳೆಯುತ್ತಿದ್ದ ಬೆಳೆಯಲ್ಲಿ ನಮಗೂ ಕೈತುಂಬಾ ನೀಡುತ್ತಿದ್ದರು. ಆದರೆ ಇಂದು ಬೆಳೆಯುವವರೇ ಕಡಿಮೆಯಾಗಿದ್ದಾರೆ. ಅರ್ಚಕರು ಹಲವಾರು ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ದೇವಾಲಯಗಳಲ್ಲೂ ಸಾಕಷ್ಟು ಸಮಸ್ಯೆಗಳಿವೆ. ಈ ಬಗ್ಗೆ ಸಮಾವೇಶದಲ್ಲಿ ಗಮನ ಸೆಳೆಯಲಾಗುವುದು ಎಂದು ತಿಳಿಸಿದರು.

ಸಂಘದ ಜಿಲ್ಲಾಧ್ಯಕ್ಷ ಅರುಣ್‌ಕುಮಾರ್, ಮುಖಂಡರಾದ ಶಶಿಮೋಹನ್, ಶಿವಲಿಂಗಪ್ಪ, ಪುಟ್ಟಬಸಪ್ಪ, ಶಿವಲಿಂಗಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net