

ಮೈಸೂರು: ಅಖಿಲ ಭಾರತ ಅಸಂಘಟಿತ ಪುರೋಹಿತ ಕಾರ್ಮಿಕ ಫೆಡರೇಷನ್‌ನ ಜಿಲ್ಲಾ ಮತ್ತು ತಾಲೂಕು ಘಟಕದ ಕಚೇರಿ ಮಂಗಳವಾರ ಉದ್ಘಾಟನೆಗೊಂಡಿತು.
ವಿದ್ಯಾರಣ್ಯಪುರಂನ ಅಂದಾನಿ ವೃತ್ತದ ಬಳಿ ಆಯೋಜಿಸಿದ್ದ ಕಚೇರಿಯ ಉದ್ಘಾಟನಾ ಸಮಾರಂಭದಲ್ಲಿ ನಗರಪಾಲಿಕೆ ಮಾಜಿ ಸದಸ್ಯ ಮ.ವಿ.ರಾಮಪ್ರಸಾದ್ ಮಾತನಾಡಿ, ಪುರೋಹಿತರು ಎಂದರೆ ಹಿಂದೆ ಪುರದ ಹಿತ ಕಾಯುವವರು ಎನ್ನುತ್ತಿದ್ದರು. ಈ ನಿಟ್ಟಿನಲ್ಲಿ ಒಕ್ಕೂಟ ಹೆಜ್ಜೆ ಇಡಬೇಕು. ಪುರೋಹಿತರು ಜನರೊಂದಿಗೆ ನಿಕಟ ಸಂಪರ್ಕ ಹೊಂದಬೇಕು ಎಂದು ತಿಳಿಸಿದರು.
ಅಭ್ಯಾಸ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಧಾರ್ಮಿಕ ವಿಧಿವಿಧಾನ, ಶಾಸ್ತ್ರಗಳ ಕುರಿತಂತೆ ಜ್ಞಾನ ವೃದ್ಧಿಸಿಕೊಳ್ಳಬೇಕು. ಇದರಿಂದ ನಮ್ಮ ಸಂಸ್ಕೃತಿಯ ಬಗ್ಗೆ ಜ್ಞಾನ ಮತ್ತು ಆಚಾರ, ವಿಚಾರಗಳಲ್ಲಿ ಪರಿಣತಿ ಸಾಧಿಸಲು ಸಾಧ್ಯವಾಗಲಿದೆ ಎಂದರು.
ಹತ್ತಾರು ಕಾರ್ಯಕ್ರಮಗಳ ಮೂಲಕ ಪುರೋಹಿತ ಸಮುದಾಯ ಸಂಘಟನೆಯಾಗಬೇಕು. ಒಕ್ಕೂಟದಿಂದ ಆರೋಗ್ಯ ತಪಾಸಣಾ ಶಿಬಿರದ ಉಚಿತ ಆಯೋಜನೆ ಮಾಡಬೇಕು. ಅದಕ್ಕಾಗಿ ಪ್ರಾಯೋಜಕತ್ವ ಪಡೆಯುವ ಅವಕಾಶ ಬಳಸಿಕೊಳ್ಳಬೇಕು. ಜತೆಗೆ ಸರ್ಕಾರ ವಿವಿಧ ಯೋಜನೆಗಳ ಪ್ರಯೋಜನವನ್ನು ಸಂಘಟನೆ ಮೂಲಕ ಪಡೆಯಲು ಮುಂದಾಗಬೇಕು. ಪುರೋಹಿತರನ್ನು ಒಕ್ಕೂಟದ ಪದಾಧಿಕಾರಿಗಳು ಭೇಟಿ ಮಾಡಿ, ಸದಸ್ಯತ್ವ ಮಾಡಿಸಿ ಸಂಘಟನೆ ಮಾಡಬೇಕು. ಸದಸ್ಯತ್ವ ಮಾಡಿಕೊಳ್ಳುವುದರಿಂದ ದೊರೆಯುವ ಪ್ರಯೋಜನಗಳ ಬಗ್ಗೆ ಕರಪತ್ರದ ಮೂಲಕ ಮನವರಿಕೆ ಮಾಡಿಕೊಡಬೇಕು ಎಂದು ಸಲಹೆ ನೀಡಿದರು.
ದಾನಿಗಳ ಮೂಲಕ ಸಂಕಷ್ಟದಲ್ಲಿರುವ ಪುರೋಹಿತ ಕುಟುಂಬಗಳಿಗೆ ನೆರವಾಗಲು ಒಕ್ಕೂಟ ಕಾರ್ಯಕ್ರಮಗಳನ್ನು ರೂಪಿಸಿಕೊಳ್ಳ ಬೇಕು. ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡುವ ಪರಿಪಾಠ ಬೆಳೆಸಿಕೊಳ್ಳಬೇಕು. ಒಕ್ಕೂಟದ ಪದಾಧಿಕಾರಿಗಳು ಸಮರ್ಪಣಾ ಮನೋಭಾವ ದಿಂದ ತೊಡಗಿಸಿಕೊಂಡರೆ ಮೈಸೂರು ಭಾಗದ ಪುರೋಹಿತರು ಸಂಘಟನೆಯಾ ಗಲು ಸಾಧ್ಯವಿದೆ. ಕೆಲಸ ಮಾಡಿದರೆ ಯಶಸ್ಸು ಲಭಿಸಲಿದ್ದು ಪುರೋಹಿತರ ಒಕ್ಕೂಟವೆಂದರೆ ಜನ ಬಯಸುವಂತೆ ಆಗಬೇಕು ಎಂದು ಕಿವಿಮಾತು ಹೇಳಿದರು.
ಜಿಲ್ಲಾ ಬ್ರಾಹ್ಮಣ ಯುವ ವೇದಿಕೆಯ ಪ್ರಧಾನ ಕಾರ್ಯದರ್ಶಿ ವಿಕ್ರಮ್ ಅಯ್ಯಂಗಾರ್ ಮಾತನಾಡಿ, ಪುರೋಹಿತ ವರ್ಗದ ಶ್ರೇಯೋಭಿವೃದ್ಧಿಗಾಗಿ ಇಂತಹ ಸಂಘಟನೆ ನಿಜಕ್ಕೂ ಅಗತ್ಯವಿತ್ತು. ಮಂಗಳಕಾರ್ಯಗಳ ನೇತೃತ್ವ ವಹಿಸುವಲ್ಲಿ ಪುರೋಹಿತರ ಪಾತ್ರ ಸಮಾಜದಲ್ಲಿ ಮಹತ್ವ ಹೊಂದಿದೆ ಎಂದು ತಿಳಿಸಿದರು.
ಇದೇ ವೇಳೆ ಜೀವ ವಿಮೆ ಪತ್ರಗಳನ್ನು ಒಕ್ಕೂಟದ ಸದಸ್ಯರಿಗೆ ಉಚಿತವಾಗಿ ವಿತರಣೆ ಮಾಡಲಾಯಿತು. ಒಕ್ಕೂಟದ ರಾಜ್ಯ ಕಾರ್ಯದರ್ಶಿ ಸತೀಶ್ ಸಿಂಹ, ಪದಾಧಿಕಾರಿಗಳಾದ ಸಂತೋಷ್ ಕುಮಾರ್ ದೇಶಿಕ್, ಎನ್.ಲಕ್ಷ್ಮೀಶ, ಮಧುಶಂಕರ್ ಭಟ್, ರವಿಶಂಕರ್, ಮನೋಹರ್, ಎಂ.ವಿ. ಗಣೇಶ್, ಗುರುರಾಜ್, ವೆಂಕಟೇಶ್, ವಿಜಯ ವಿಠಲಾಚಾರ್ಯ, ರಾಜಣ್ಣ ಹಾಗೂ ಇತರರು ಇದ್ದರು.