

ಮಳವಳ್ಳಿ: ತಾಲೂಕಿನ ಮಾಗನೂರು ಸಮೀಪ ಬೈಕ್ ಸವಾರನೊಬ್ಬ ನಿಯಂತ್ರಣ ತಪ್ಪಿ ಬುಧವಾರ ರಾತ್ರಿ ರಸ್ತೆ ಬದಿಯ ನಾಲೆಗೆ ಬಿದ್ದು ಮೃತಪಟ್ಟಿದ್ದಾನೆ.
ತಾಲೂಕಿನ ನಿಡಘಟ್ಟ ಗ್ರಾಮದ ಚಂದ್ರಶೇಖರ್ ಅವರ ಪುತ್ರ ಧನುಷ್(22) ಮೃತರು. ಈತ ನಿಡಘಟ್ಟ ಗ್ರಾಮದ ಶಿವನ ದೇವಸ್ಥಾನದ ಅರ್ಚಕರಾಗಿದ್ದು, ಬುಧವಾರ ಕೋರೆಗಾಲ ಗ್ರಾಮಕ್ಕೆ ಗೃಹ ಪ್ರವೇಶ ಪೂಜಾ ಕಾರ್ಯಕ್ಕಾಗಿ ತೆರಳಿದ್ದರು. ಪೂಜಾ ಸಿದ್ಧತೆಗಳನ್ನು ಪೂರೈಸಿ ಸ್ವಗ್ರಾಮಕ್ಕೆ ಬೈಕ್‌ನಲ್ಲಿ ವಾಪಸಾಗುತ್ತಿದ್ದ ವೇಳೆ ಅವಘಡ ಸಂಭವಿಸಿದೆ. ಗುರುವಾರ ಮಧ್ಯಾಹ್ನ ಪ್ರಕರಣ ಬೆಳಕಿಗೆ ಬಂದಿದ್ದು, ಸ್ಥಳಕ್ಕೆ ಡಿವೈಎಸ್‌ಪಿ ವಿ.ಕೃಷ್ಣಪ್ಪ ಪೊಲೀಸ್ ಸಿಬ್ಬಂದಿ ತೆರಳಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬದವರಿಗೆ ಒಪ್ಪಿಸಲಾಗಿದೆ. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.