ತಾನಿದ್ದ ದೇಗುಲಗಳಲ್ಲೇ ಕಳವು ಮಾಡಿದ್ದ ಅರ್ಚಕನ ಸೆರೆ

9 mlv 2
ಮಳವಳ್ಳಿ ತಾಲೂಕಿನ ಗೌಡಗೆರೆ ಬಸವೇಶ್ವರ ಮತ್ತು ಪಟ್ಟಣದ ಮೂಗದೇವಮ್ಮ ದೇವಸ್ಥಾನಗಳಲ್ಲಿ ಕಳ್ಳತನ ಮಾಡಿದ್ದ ಅರ್ಚಕ ಪ್ರದೀಪ ಎಂಬಾತನನ್ನು ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿ ಆರೋಪಿಯಿಂದ ದೇವರ ವಿಗ್ರಹ ಸೇರಿ ಪೂಜಾ ಸಾಮಾಗ್ರಿ ಮತ್ತು 1.85 ಲಕ್ಷ ರೂ. ನಗದು ಹಣವನ್ನು ವಶಕ್ಕೆ ಪಡೆದಿರುವುದು. ಡಿವೈಎಸ್ ಪಿ ಕೃಷ್ಣಪ್ಪ, ಸಿಪಿಐ ರವಿಕುಮಾರ್, ಶ್ರರವಣದಾಸರೆಡ್ಡಿ ಹಾಗೂ ತನಿಖಾ ತಂಡದ ಸಿಬ್ಬಂದಿಗಳು ಇದ್ದಾರೆ.
Published on

ಮಳವಳ್ಳಿ : ಬೇಲಿಯೇ ಎದ್ದು ಹೊಲ ಮೇದಂತೆ ದೇವಸ್ಥಾನದ ಬೆಲೆಬಾಳುವ ವಸ್ತುಗಳನ್ನು ಕಳವು ಮಾಡಿದ್ದ ಅರ್ಚಕನನ್ನು ಬಂಧಿಸುವಲ್ಲಿ ಮಳವಳ್ಳಿ ಗ್ರಾಮಾಂತರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

ಕೆ. ಆರ್.ಪೇಟೆ ತಾಲೂಕಿನ ಅಘಲಯ ಗ್ರಾಮದ ಪ್ರದೀಪ್ ಬಂಧಿತ ಆರೋಪಿ. ತಾಲೂಕಿನ ವಿವಿಧ ಎರಡು ದೇವಸ್ಥಾನಗಳಲ್ಲಿ ನಡೆದಿದ್ದ ಕಳ್ಳತನ ಪ್ರಕರಣಗಳ ತನಿಖೆ ನಡೆಸಿದ್ದ ಪೊಲೀಸರಿಗೆ ದೇವಸ್ಥಾನದ ಅರ್ಚಕನೇ ದೇವರ ವಿಗ್ರಹ ಸೇರಿದಂತೆ ಹಲವು ಸಾಮಗ್ರಿಗಳನ್ನು ಕಳವು ಮಾಡಿರುವುದು ಗೊತ್ತಾಗಿದ್ದು, ಆರೋಪಿ ಅರ್ಚಕನನ್ನು ಮಾಲು ಸಮೇತ ವಶಕ್ಕೆ ಪಡೆದಿದ್ದಾರೆ.

ಹಲವು ವರ್ಷಗಳ ಹಿಂದೆ ಗೌಡಗೆರೆ ಗ್ರಾಮದ ಅರ್ಚಕ ಕುಟುಂಬವೊಂದರ ಯುವತಿಯನ್ನು ಆರೋಪಿ ಪ್ರದೀಪ್ ವಿವಾಹವಾಗಿದ್ದು, ಹಲವು ತಿಂಗಳಿನಿಂದ ಇದೇ ಗ್ರಾಮದಲ್ಲಿದ್ದ ಬಸವೇಶ್ವರ ಹಾಗೂ ಪಟ್ಟಣದ ಮೂಗದೇವಮ್ಮ ದೇವಸ್ಥಾನಗಳಲ್ಲಿ ಪೂಜಾ ಕಾರ್ಯ ನಡೆಸುತ್ತಿದ್ದ. ಅ.10 ರಂದು ಗೌಡಗೆರೆ ಗ್ರಾಮದ ಬಸವೇಶ್ವರ ದೇವಸ್ಥಾನದಲ್ಲಿ ಹಾಗೂ ಜ.3 ರಂದು ಪಟ್ಟಣದ ಮಂಚನಹಳ್ಳಿ ಬಡಾವಣೆಯ ಮೂಗದೇವಮ್ಮ ದೇವಾಲಯದಲ್ಲಿ ಕಳ್ಳತನ ನಡೆದಿತ್ತು.

ಈ ಎರಡು ಕಳವು ಪ್ರಕರಣದ ತನಿಖೆಯನ್ನು ಡಿವೈಎಸ್ಪಿ ಕೃಷ್ಣಪ್ಪ ಮಾರ್ಗದರ್ಶನದಲ್ಲಿ ಕೈಗೆತ್ತಿಕೊಂಡಿದ್ದ ಗ್ರಾಮಾಂತರ ಠಾಣೆ ಪೊಲೀಸ್ ಇನ್‌ಸ್ಪೆಕ್ಟರ್ ಬಿ.ಜಿ.ಮಹೇಶ್ ಹಾಗೂ ಪಿಎಸ್‌ಐ ಶ್ರವಣದಾಸರೆಡ್ಡಿ ನೇತೃತ್ವದ ಅಪರಾಧ ತನಿಖಾ ದಳದ ತಂಡ ಅರ್ಚಕ ಪ್ರದೀಪ್ ನ ಚಲನವಲನಗಳ ಮೇಲೆ ಅನುಮಾನಗೊಂಡು ವಶಕ್ಕೆ ಪಡೆದಿದೆ. ಬಳಿಕ ಹೆಚ್ಚಿನ ವಿಚಾರಣೆ ನಡೆಸಿದಾಗ ದೇವಾಲಯಗಳಲ್ಲಿ ತಾನೇ ಕಳವು ಮಾಡಿದ್ದ ಬಗ್ಗೆ ಬಾಯಿಬಿಟ್ಟಿದ್ದಾನೆ. ಬಂಧಿತನಿಂದ 5.5 ಲಕ್ಷ ರೂ. ಮೌಲ್ಯದ ದೇವರ ವಿಗ್ರಹ ಮತ್ತು ಇತರ ಪೂಜಾ ಸಾಮಗ್ರಿ ಮತ್ತು 1.85 ಲಕ್ಷ ರೂ.ಹಣವನ್ನು ವಶಕ್ಕೆ ಪಡೆದು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ತನಿಖಾ ತಂಡದಲ್ಲಿ ಸಿಬ್ಬಂದಿ ಮಣಿಕಂಠಸ್ವಾಮಿ, ಶಿವಕುಮಾರ, ನಾಗೇಂದ್ರ, ಪರಮಾನಂದ, ಕೌಶಿಕ್, ಬಾನಪ್ಪ ರಾಥೋಡ್, ರವಿಕುಮಾರ್, ಲೋಕೇಶ್ ತಂಡ ಕಾರ್ಯ ನಿರ್ವಹಿಸಿದ್ದು, ಜಿಲ್ಲಾ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಅಭಿನಂದಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net