ಬೆಲೆ ಗಗನಕ್ಕೆ, ಜನರ ಬದುಕು ಪಾತಾಳಕ್ಕೆ

New DKC Be
Published on

ಹುಬ್ಬಳ್ಳಿ : ನರೇಂದ್ರ ಮೋದಿ ಆಡಳಿತದಲ್ಲಿ ನಿತ್ಯೋಪಯೋಗಿ ವಸ್ತುಗಳ ಬೆಲೆ ಗಗನಕ್ಕೆ ಏರುತ್ತಿದ್ದರೆ, ಜನಸಾಮಾನ್ಯರ ಬದುಕು ಪಾತಾಳಕ್ಕೆ ಇಳಿಯುತ್ತಿದೆ. ಬಿಜೆಪಿ ಜನಾಕ್ರೋಶ ಕೇಂದ್ರ ಸರ್ಕಾರದ ವಿರುದ್ಧ ಇರಬೇಕೆ ಹೊರತು, ಜನಪರ ಆಡಳಿತ ನೀಡುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಅಲ್ಲ ಎಂದು ಕೆಪಿಸಿಸಿ ಅಧ್ಯಕ್ಷ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಹೇಳಿದರು.

ನಗರದಲ್ಲಿ ಗುರುವಾರ ಆಯೋಜಿಸಿದ್ದ ಕೇಂದ್ರ ಸರ್ಕಾರದ ವಿರುದ್ಧ ಬೆಲೆ ಏರಿಕೆ ಖಂಡಿಸಿ ಹಾಗೂ ಸಂವಿಧಾನ ಬಚಾವೊ ಪ್ರತಿಭಟನಾ ಸಮಾವೇಶದಲ್ಲಿ ಅವರು ಮಾತನಾಡಿದರು.

ಕಾಂಗ್ರೆಸ್ ಸರ್ಕಾರ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಯಂತೆ ನಡೆದುಕೊಳ್ಳುತ್ತಿದೆ. ಐದು ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದೆ. 12,692 ಗುತ್ತಿಗೆ ಪೌರ ಕಾರ್ವಿುಕರನ್ನು ಕಾಯಂಗೊಳಿಸಿದೆ. ವರ್ಷಕ್ಕೆ 50-60 ಸಾವಿರ ರೂ.ಯನ್ನು ಜನರ ಬದುಕು ಕಟ್ಟಿಕೊಳ್ಳಲು ನೀಡುತ್ತಿದ್ದೇವೆ. ಉಚಿತ ವಿದ್ಯುತ್, ಸಾರಿಗೆ ಬಸ್​ಗಳಲ್ಲಿ ಉಚಿತ ಪ್ರಯಾಣ, ಮಾಸಿಕ 2 ಸಾವಿರ ರೂ. ಹಣದಿಂದ ಮಹಿಳೆಯರಿಗೆ ಅನುಕೂಲವಾಗಿದೆ ಎಂದರು.

ಬಿಜೆಪಿಯವರಿಗೆ ಬಡವರು, ರೈತರು ಕಾಣಿಸುವುದೇ ಇಲ್ಲ. ದೊಡ್ಡ ದೊಡ್ಡ ಉದ್ಯಮಿಗಳ ಕೋಟ್ಯಂತರ ರೂ. ಸಾಲ ಮನ್ನಾ ಮಾಡುವ ಬಿಜೆಪಿ ಸರ್ಕಾರ, ಬಡವರಪರ ಯೋಜನೆಗಳನ್ನು ರೂಪಿಸಿದ ಉದಾಹರಣೆಗಳೇ ಇಲ್ಲ. ಜಿಎಸ್​ಟಿ ಸಂಗ್ರಹ, ಬೆಲೆ ಏರಿಕೆಯಂತಹ ಕ್ರಮಗಳಿಂದಾಗಿ ಕೇಂದ್ರ ಸರ್ಕಾರ ಜನರ ಪಿಕ್​ಪಾಕೆಟ್ ಮಾಡುತ್ತಿದೆ ಎಂದು ಟೀಕಿಸಿದರು.

ರಾಜ್ಯ ಕಾಂಗ್ರೆಸ್ ಸರ್ಕಾರದ ಯಶಸ್ವಿ ಆಡಳಿತಕ್ಕೆ ಎರಡು ವರ್ಷ ಪೂರ್ಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಮೇ 20ರಂದು ವಿಜಯನಗರದಲ್ಲಿ ಸಂಭ್ರಮಾಚರಣೆ ಆಯೋಜಿಸಲಾಗುತ್ತಿದೆ. ಮಹದಾಯಿ ನದಿ ನೀರಿನ ಬಗ್ಗೆ ಮಾತನಾಡುವ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಯೋಜನೆ ಅನುಷ್ಠಾನಕ್ಕೆ ಯಾಕೆ ಪ್ರಯತ್ನಿಸುತ್ತಿಲ್ಲ ಎಂದು ಪ್ರಶ್ನಿಸಿದ ಡಿ.ಕೆ. ಶಿವಕುಮಾರ, ಈ ಯೋಜನೆ ಅನುಷ್ಠಾನಕ್ಕಾಗಿ ಮೇ 7ರಂದು ಕೇಂದ್ರ ಸಚಿವರೊಂದಿಗೆ ಮಾತುಕತೆಗೆ ದೆಹಲಿಗೆ ಹೊರಟಿದ್ದೇವೆ ಎಂದು ಹೇಳಿದರು.

ಕಾಂಗ್ರೆಸ್ ಸಮಾವೇಶಗಳಿಗೆ ಬಿಜೆಪಿಯವರು ಅಡ್ಡಿಪಡಿಸಿದರೆ, ಭವಿಷ್ಯದಲ್ಲಿ ರಾಜ್ಯದಲ್ಲಿ ಬಿಜೆಪಿಯವರಿಗೆ ಕಾರ್ಯಕ್ರಮಗಳನ್ನು ಆಯೋಜಿಸಲು ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net