

ಅಥಣಿ: ತಾಲೂಕಿನ ಸಂಕೋನಟ್ಟಿ ಗ್ರಾಮದ ಬಳಿಯ ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಸ್ಥಾನಕ್ಕೆ ಸೋಮವಾರ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಅಧ್ಯಕ್ಷರಾಗಿ ಪರಪ್ಪ ಸವದಿ
ಹಾಗೂ ಉಪಾಧ್ಯಕ್ಷರನ್ನಾಗಿ ಶಂಕರ ವಾಘಮೋರೆ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅಧ್ಯಕ್ಷ ಪರಪ್ಪ ಸವದಿ, ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆ ಸರ್ಕಾರದ ನಿರ್ದೇಶನದಂತೆ ಪ್ರಸಕ್ತ ಹಂಗಾಮಿನಲ್ಲಿ ಪ್ರತಿ ಟನ್ ಕಬ್ಬಿಗೆ ೩,೩೦೦ ರೂ. ದರ ನೀಡಲು ನಿರ್ಧಾರ ತೆಗೆದುಕೊಂಡಿದೆ. ಪ್ರಸಕ್ತ ಕಬ್ಬು ನುರಿಸುವ ಹಂಗಾಮಿನಲ್ಲಿ ಎಂಟು ಲಕ್ಷ ಮೆಟ್ರಿಕ್ ಟನ್ ಕಬ್ಬು ನುರಿಸುವ ಗುರಿ ಹೊಂದಲಾಗಿದೆ. ಕಾರ್ಖಾನೆ ಲಾಭದೆಡೆಗೆ ಕೊಂಡೊಯ್ಯುವ ಜತೆಗೆ ಮುಂಬರುವ ವರ್ಷಗಳಲ್ಲಿ ರಾಜ್ಯದಲ್ಲೇ ಮಾದರಿ ಸಹಕಾರಿ ಸಕ್ಕರೆ ಕಾರ್ಖಾನೆಯನ್ನಾಗಿ ಮಾಡಲು ಶ್ರಮಿಸುತ್ತೇನೆ ಎಂದರು. ಕೃಷ್ಣಾ ಕಾರ್ಖಾನೆ ೨೦ ವರ್ಷಗಳಿಂದ ಕಬ್ಬಿಗೆ ಉತ್ತಮ ಬೆಲೆ ನೀಡುತ್ತಿದೆ. ರೈತರು ಹೆಚ್ಚು ಗುಣಮಟ್ಟದ ಕಬ್ಬು ಕಾರ್ಖಾನೆಗೆ ಪೂರೈಸುವ ಮೂಲಕ ಪ್ರಸಕ್ತ ಸಾಲಿನ ಕಬ್ಬು ನುರಿಸುವ ಹಂಗಾಮು ಯಶಸ್ಸಿಗೆ ಕೈಜೋಡಿಸಬೇಕು. ಅಥಣಿ ಹಾಗೂ ಸುತ್ತಮುತ್ತಲಿನ ರೈತರ ಅಭಿವೃದ್ಧಿಗೆ ಕಾರ್ಖಾನೆ ಸದಾ ಬದ್ಧವಾಗಿದೆ ಎಂದರು.
ಪಕ್ಕದ ಮಹಾರಾಷ್ಟçದ ಹಲವು ಸಕ್ಕರೆ ಕಾರ್ಖಾನೆಗಳು ಕರ್ನಾಟಕದ ಕಬ್ಬು ನುರಿಸುವ ಸಲುವಾಗಿ ಹೆಚ್ಚಿನ ಬೆಲೆ ನೀಡುವ ಆಮಿಷ ಒಡ್ಡುತ್ತಿದ್ದು, ಅಲ್ಲಿ ತೂಕದಲ್ಲಿ ಮೋಸವಾಗಲಿದೆ. ಅಂತಹ ವಂಚನೆಗಳಿಂದ ರೈತರು ಜಾಗರೂಕರಾಗಿರಬೇಕು ಎಂದು ಸಲಹೆ ನೀಡಿದರು.
ಕಾರ್ಖಾನೆ ನಿರ್ದೇಶಕರಾದ ಶಾಂತಿನಾಥ ನಂದೇಶ್ವರ, ಗುರುಬಸು ತೆವರಮನಿ, ಗೂಳಪ್ಪ ಜತ್ತಿ, ದಯಾ ಕುಲಕರ್ಣಿ, ಸುನಂದಾ ನಾಯಿಕ, ಸೌರಭ ಪಾಟೀಲ, ಸಿದ್ರಾಯ ನಾಯಿಕ, ರಮೇಶ ಪಟ್ಟಣ, ವಿಶ್ವನಾಥ ಪಾಟೀಲ, ಮಲ್ಲಿಕಾರ್ಜುನ ಗೋಟಖಿಂಡಿ, ಹನುಮಂತ ಜಗದೇವ, ವ್ಯವಸ್ಥಾಪಕ ನಿರ್ದೇಶಕ ಜಿ.ಎಂ.ಪಾಟೀಲ, ಮುಖಂಡರಾದ ಮಲ್ಲೇಶ ಸವದಿ, ಶ್ರೀಶೈಲ ನಾಯಿಕ, ಶಿವಾನಂದ ಸವದಿ, ರಾಮಣ್ಣ ಗುಮತಾಜ, ಶಿವಾನಂದ ಗುರುಬಾವಿ, ಲೋಕೇಶ ಪಾಟೀಲ, ಸುರೇಶ ಠಕ್ಕಣ್ಣವರ, ಶಂಕರ ಗೋಟಖಿಂಡಿ, ಎಚ್.ಡಿ.ಧರಿಗೌಡರ ಇತರರಿದ್ದರು.