ಜನರಿಗೆ ಬೆಲೆ ಏರಿಕೆ ಹೊರೆ ‘ಗ್ಯಾರಂಟಿ’

BJP PROTEST
Published on

ಹಳಿಯಾಳ: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕಾಗಿ ಮಾಡಿರುವ ಅವೈಜ್ಞಾನಿಕ ಗ್ಯಾರಂಟಿಗಳು ಈಗ ಬಕಾಸುರನಂತೆ ರಾಜ್ಯದ ಬೊಕ್ಕಸದ ಖಜಾನೆಯನ್ನು ಖಾಲಿ ಮಾಡುತ್ತಿದ್ದು, ಇದಕ್ಕಾಗಿ ಕಾಂಗ್ರೆಸ್ ಸರ್ಕಾರ ಬೆಲೆ ಏರಿಕೆ ಎಂಬ ಅಸ್ತ್ರವನ್ನು ಪದೇ ಪದೆ ಜನಸಾಮಾನ್ಯರ ಮೇಲೆ ಪ್ರಯೋಗಿಸುತ್ತಿದೆ ಎಂದು ರಾಜ್ಯ ಬಿಜೆಪಿ ಕಾರ್ಯಾಕಾರಿಣಿ ಸಮಿತಿ ಸದಸ್ಯ ಹಾಗೂ ಮಾಜಿ ಶಾಸಕ ಸುನೀಲ ಹೆಗಡೆ ಕಿಡಿ ಕಾರಿದರು.

ರಾಜ್ಯ ಕಾಂಗ್ರೆಸ್ ಸರ್ಕಾರ ಬಸ್ ಪ್ರಯಾಣ ದರ ಹೆಚ್ಚಿಸಿರುವುದು, ಬಾಣಂತಿಯರ ನಿರಂತರ ಸಾವು ಹಾಗೂ ಗುತ್ತಿಗೆದಾರರ ಆತ್ಮಹತ್ಯೆ ಖಂಡಿಸಿ ಶನಿವಾರ ಪಟ್ಟಣದ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ಹಳಿಯಾಳ ತಾಲೂಕಾ ಬಿಜೆಪಿಯಿಂದ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.

ಹೊಸ ವರ್ಷದ ಸಂಭ್ರಮದಲ್ಲಿರುವ ರಾಜ್ಯದ ಜನರ ಮೇಲೆ ಸಿದ್ದರಾಮಯ್ಯ ಸರ್ಕಾರದ ವಕ್ರದೃಷ್ಟಿ ಬಿದ್ದಿದೆ. ಈಗ ಬಸ್ ದರವನ್ನು ಶೇ.15% ರಷ್ಟು ಏರಿಸಿದೆ. ಮಹಿಳೆಯರಿಗೆ ಫ್ರೀ ಬಸ್ ಘೊಷಿಸಿ ಅದರ ನಷ್ಟವನ್ನು, ಪುರುಷ ಪ್ರಯಾಣಿಕರಿಂದ ವಸೂಲಿಗೆ ರಾಜ್ಯ ಕಾಂಗ್ರೆಸ್ ಸರ್ಕಾರ ಇಳಿದಿದೆ ಎಂದು ಆಕ್ರೋಶ ವ್ಯಕ್ತಪಡಿದರು.

ಇದೆ ರೀತಿ ರಾಜ್ಯದಲ್ಲಿ ಸಾಲು ಸಾಲಾಗಿ ಬಾಣಂತಿಯರ ಸಾವು ಹಾಗೂ ಗುತ್ತಿಗೆದಾರರ ಆತ್ಮಹತ್ಯೆಗೆ ರಾಜ್ಯ ಕಾಂಗ್ರೆಸ್ ಸರ್ಕಾರವೇ ಕಾರಣ ಆಗಿರುವುದರಿಂದ ಶೀಘ್ರವೇ ಅವರ ಕುಟುಂಬಗಳಿಗೆ ಪರಿಹಾರ ನೀಡಬೇಕು. ಸಚಿವ ಪ್ರಿಯಾಂಕ ಖರ್ಗೆ ಹಾಗೂ ದಿನೇಶ್ ಗುಂಡೂರಾವ್ ಅವರ ರಾಜಿನಾಮೆ ಪಡೆಯಬೇಕು ಎಂದು ಒತ್ತಾಯಿಸಿದರು.

ವಿಧಾನ ಪರಿಷತ್ ಮಾಜಿ ಸದಸ್ಯ ಎಸ್ ಎಲ್ ಘೊಟ್ನೇಕರ ಮಾತನಾಡಿ, ವಿದ್ಯುತ್, ನೀರು, ಮುದ್ರಾಂಕ ಶುಲ್ಕ, ಆಸ್ತಿ ಮಾರ್ಗಸೂಚಿ ದರ, ಇನ್ನಿತರ ಬೆಲೆಗಳ ಏರಿಕೆಗೆ ಸಮಾಧಾನವಾಗದೇ ಡಿಸೇಲ್, ಪೆಟ್ರೋಲ್ ದರ ಹೆಚ್ಚಿಸಿತು. ಇದೀಗ ಬಸ್ ದರ ಕೂಡ ಹೆಚ್ಚಿಸಿ ಜನರಿಗೆ ಕಾಂಗ್ರೆಸ್ ಮಕ್ಮಲ್ ಟೋಪಿ ಹಾಕುತ್ತಿದೆ ಎಂದು ಟೀಕಾ ಪ್ರಹಾರ ನಡೆಸಿದರು.

ಪ್ರತಿಭಟನೆಯಲ್ಲಿ ಪಕ್ಷದ ತಾಲೂಕಾ ಅಧ್ಯಕ್ಷ ವಿಠ್ಠಲ ಸಿದ್ಧನ್ನವರ, ಪ್ರಮುಖರಾದ ಸಂತೋಷ ಘಟಕಾಂಬಳೆ, ತಾನಾಜಿ ಪಟ್ಟೇಕರ, ಹನುಮಂತ ಚಿನಗಿನಕೊಪ್ಪ, ಚೂಡಪ್ಪ ಬೋಬಾಟಿ, ಜಯಲಕ್ಷ್ಮೀ ಚವ್ಹಾಣ, ಶಕುಂತಲಾ ಜಾಧವ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net