ಕೊರೊನಾ ಭೀತಿ ಹಿನ್ನೆಲೆಯಲ್ಲಿ 5ನೇ ತರಗತಿವರೆಗೆ ರಜೆ, ಘೋಷಣೆ; ಮಾಹಿತಿ ಹಂಚಿಕೊಂಡ ಸಚಿವ ಸುರೇಶ್​ಕುಮಾರ್​

sureshkumarbjp-1525873059
Published on

ಬೆಂಗಳೂರು: ನಗರ ಹಾಗೂ ಬೆಂಗಳೂರು ಗ್ರಾಮಾಂತರ ಭಾಗದ ಶಾಲೆಗಳ 5ನೇ ತರಗತಿಯವರೆಗಿನ ಮಕ್ಕಳಿಗೆ ನಾಳೆಯಿಂದ (ಮಾ.10, ಮಂಗಳವಾರ) ರಜೆ ಘೋಷಣೆ ಮಾಡಲಾಗಿದೆ.

ರಾಜ್ಯ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನಿರ್ಧರಿಸಿದಂತೆ ಬಿಬಿಎಂಪಿ, ಬೆಂಗಳೂರು‌ ನಗರ ಜಿಲ್ಲೆ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಎಲ್ಲ ಪ್ರಾಥಮಿಕ ಶಾಲೆಗಳಿಗೆ ಮುಂದಿನ ಆದೇಶದವರೆಗೆ ರಜೆ ಘೋಷಿಸಲಾಗಿದೆ.

ಈ ಬಗ್ಗೆ ಶಿಕ್ಷಣ ಸಚಿವ ಸುರೇಶ್​ ಕುಮಾರ್​ ಅವರು ಟ್ವೀಟ್​ ಮಾಡಿದ್ದಾರೆ. ಅಲ್ಲದೆ ಟ್ವಿಟ್​ನಲ್ಲಿ ವಿಡಿಯೋ ಕೂಡ ಹಂಚಿಕೊಂಡಿದ್ದಾರೆ. ಅದರಲ್ಲಿ ಮಾರಕ ವೈರಸ್​ ಕೊರೊನಾದ ಬಗ್ಗೆ ರಾಜ್ಯದಲ್ಲಿ ಆತಂಕ ಪಡುವ ಅಗತ್ಯವಿಲ್ಲ. ಆದರೆ ಮುಂಜಾಗ್ರತಾ ಕ್ರಮವಾಗಿ ಮಕ್ಕಳಿಗೆ ಶಾಲೆ ರಜೆ ಘೋಷಣೆ ಮಾಡಲಾಗಿದೆ ಎಂದಿದ್ದಾರೆ.

ಬೆಂಗಳೂರು ನಗರ ಹಾಗೂ ಬೆಂಗಳೂರು ಗ್ರಾಮಾಂತರ ಹೊರತುಪಡಿಸಿ ಉಳಿದ ಕಡೆ ಪರೀಕ್ಷೆಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು ಸೂಚಿಸಲಾಗಿದೆ. ಬೆಂಗಳೂರು ಮತ್ತು ಗ್ರಾಮಾಂತ ಭಾಗಗಳಲ್ಲಿ ಪರೀಕ್ಷೆ ಸಮಯವನ್ನು ಶೀಘ್ರ ತಿಳಿಸಲಾಗುವುದು.

ಭಾನುವಾರ ಬೆಂಗಳೂರು ಮತ್ತು ಗ್ರಾಮಾಂತರ ಭಾಗದ ನರ್ಸರಿ, ಎಲ್ ಕೆಜಿ, ಯುಕೆಜಿ ತರಗತಿಗಳಿಗೆ ಮುಂದಿನ ಆದೇಶದವರೆಗೆ ರಜೆ ಘೋಷಿಸಲಾಗಿತ್ತು. ಈಗ ಈ ಆದೇಶವನ್ನು 5ನೇ ತರಗತಿವರೆಗೆ ವಿಸ್ತರಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net