

ಹುನಗುಂದ: ಆಧುನಿಕ ತಂತ್ರಜ್ಞಾನ ಹಾಗೂ ವಿಜ್ಞಾನ ಮುಂದುವರೆದಿದ್ದರಿಂದ ಸರಿಯಾದ ಮುಂಜಾಗೃತಾ ಕ್ರಮ ವಹಿಸಿದರೆ ಕ್ಯಾನ್ಸರ್ ಬರಲು ಸಾಧ್ಯವೇ ಇಲ್ಲ ಎಂದು ಅಸಾಂಕ್ರಮಿಕ ರೋಗಗಳ ವಿಭಾಗದ ವೈದ್ಯಾಧಿಕಾರಿ ಡಾ. ಶಶಿಧರ ಪಾಟೀಲ ಹೇಳಿದರು.
ಪಟ್ಟಣದ ತಾಲೂಕು ಆಡಳಿತ ಮತ್ತು ಸಾರ್ವಜನಿಕ ಆಸ್ಪತ್ರೆಯಿಂದ ಬುಧವಾರ ವಿಶ್ವ ಕ್ಯಾನ್ಸರ್ ದಿನಾಚರಣೆ ಪ್ರಯುಕ್ತ ಆಯೋಜಿಸಿದ್ದ ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮದ್ಯಪಾನ, ತಂಬಾಕು ಸೇವನೆಯಿಂದ ಹಲವಾರು ರೋಗಗಳು ಹರಡಬಹುದು. ಮುನ್ನೆಚ್ಚರಿಕೆ ಕ್ರಮವಾಗಿ ವೈದ್ಯರ ಸಲಹೆ, ಸೂಚನೆಗಳನ್ನು ಪಡೆಯಬೇಕು ಎಂದರು.
ಹಿರಿಯ ಆರೋಗ್ಯ ಸಹಾಯಕ ಗುರುಲಿಂಗಪ್ಪ ಭದ್ರಣ್ಣವರ ಮಾತನಾಡಿ, ಚಟಗಳನ್ನು ನಿಯಂತ್ರಣದಲ್ಲಿಟ್ಟುಕೊಂಡು, ಸಂಸ್ಕಾರ ರೂಢಿಸಿಕೊಳ್ಳಬೇಕು. ಕ್ಯಾನ್ಸರ್ ಮುಕ್ತ ಸುಭದ್ರ ದೇಶ ಕಟ್ಟುವಲ್ಲಿ ಎಲ್ಲರೂ ಸಹಕರಿಸಬೇಕು ಎಂದರು.
ತಾಲೂಕು ಆಡಳಿತದ ಮುಂದೆ ತಹಸೀಲ್ದಾರ್ ನಿಂಗಪ್ಪ ಬಿರಾದಾರ ಮತ್ತು ತಾಲೂಕು ವೈದ್ಯಾಧಿಕಾರಿ ಡಾ.ಎಸ್.ಎಸ್. ಅಂಗಡಿ ಜಾಥಾಕ್ಕೆ ಚಾಲನೆ ನೀಡಿದರು.
ಮಾರ್ಗದರ್ಶನ ಸಂಸ್ಥೆಯ ಪ್ಯಾರಾ ಮೆಡಿಕಲ್ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳು ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿ ಇದ್ದರು. ಚಟಗಳಿಂದ ದೂರವಿರುವ ಬಗ್ಗೆ ವಿದ್ಯಾರ್ಥಿಗಳು ಅಣಕು ನಾಟಕ ಪ್ರದರ್ಶನ ನಡೆಸಿದರು. ಪಟ್ಟಣದ ಕನಕ ವೃತ್ತ, ಬಸ್ ನಿಲ್ದಾಣ, ಚನ್ನಮ್ಮ ವೃತ್ತದ ಮೂಲಕ ಜಾಥ ಸಂಚರಿಸಿ ಮಹಾಂತ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಕ್ಯಾನ್ಸರ್ ಮುಕ್ತ ಭಾರತ ಘೋಷಣೆ ಕೂಗಲಾಯಿತು.