ಮಹಿಳೆಯರ ಮೇಲಿನ ದೌರ್ಜನ್ಯ ತಡೆಗಟ್ಟಿ

14-pnp 1
Published on

ಪಾಂಡವಪುರ: ಸಂವಿಧಾನದತ್ತವಾಗಿರುವ ಮೂಲಭೂತ ಹಕ್ಕುಗಳು ಹಾಗೂ ಕರ್ತವ್ಯಗಳನ್ನು ದೇಶದ ಪ್ರತಿಯೊಬ್ಬ ನಾಗರಿಕರು ಪಾಲನೆ ಮಾಡಬೇಕು ಎಂದು ಜೆಎಂಎಫ್‌ಸಿ ನ್ಯಾಯಾಲಯದ ಕಿರಿಯ ಸಿವಿಲ್ ನ್ಯಾಯಾಧೀಶ ಸಚಿನ್‌ಕುಮಾರ್ ಶಿವಪೂಜಿ ಹೇಳಿದರು.

ಶುಕ್ರವಾರ ಪಟ್ಟಣದ ಪಿಇಎಸ್ ಬಾಲಕಿಯರ ಪ್ರೌಢಶಾಲೆಯಲ್ಲಿ ತಾಲೂಕು ಕಾನೂನು ಸೇವೆ ಮತ್ತು ವಕೀಲರ ಸಂಘದ ಆಶ್ರಯದಲ್ಲಿ ಆಯೋಜಿಸಿದ್ದ ಮೂಲಭೂತ ಕರ್ತವ್ಯಗಳು ಹಾಗೂ ಮಹಿಳಾ ಮತ್ತು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಬಗ್ಗೆ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಇಂದಿನ ಸಮಾಜದಲ್ಲಿ ವರದಕ್ಷಿಣೆ, ಬಾಲ್ಯವಿವಾಹ, ಮಹಿಳಾ ಹಕ್ಕುಗಳು, ಮಹಿಳಾ ಆಸ್ತಿ ಹಕ್ಕುಗಳು ಜಾರಿಯಲ್ಲಿದ್ದರೂ ಮಹಿಳೆಯರ ಮೇಲೆ ನಿರಂತರ ದೌಜನ್ಯಗಳು ನಡೆಯುತ್ತಿವೆ. ಈ ರೀತಿಯ ದೌರ್ಜನ್ಯಗಳನ್ನು ತಡೆಯಬೇಕಿದೆ ಎಂದರು.

ಸಹಾಯಕ ಸರ್ಕಾರಿ ಅಭಿಯೋಜಕ ಎಸ್.ಶಿವಕುಮಾರ್ ಮಾತನಾಡಿ, ಮೂಲಹಕ್ಕು ಮತ್ತು ಕರ್ತವ್ಯಗಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಇವುಗಳನ್ನು ಪಾಲಿಸಿದರೆ ಭಾರತ ವಿಶ್ವದಲ್ಲೇ ಅಗ್ರ ಸ್ಥಾನಕ್ಕೇರುವುದರಲ್ಲಿ ಸಂಶಯವಿಲ್ಲ. ರಾಷ್ಟ್ರಧ್ವಜ, ರಾಷ್ಟ್ರಗೀತೆ ಹಾಗೂ ರಾಷ್ಟ್ರನಾಯಕರಿಗೆ ಗೌರವ ನೀಡುವ ಜತೆಗೆ ಪರಿಸರ, ವನ್ಯಜೀವಿ ರಕ್ಷಣೆ ಹಾಗೂ ನಮ್ಮ ಪ್ರಾಚೀನ ಸ್ಮಾರಕಗಳನ್ನು ಸಂರಕ್ಷಿಸುವುದು ನಮ್ಮ ಕರ್ತವ್ಯ ಎಂದು ತಿಳಿಸಿದರು.

ಪಿಇಎಸ್ ಬಾಲಕಿಯರ ಪ್ರೌಢಶಾಲೆ ಮುಖ್ಯ ಶಿಕ್ಷಕಿ ಬಿ.ಮಂಜುಳಾ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ವಕೀಲರ ಸಂಘದ ಅಧ್ಯಕ್ಷ ಕೆ.ಎಚ್.ರಾಮೇಗೌಡ, ಕಾರ್ಯದರ್ಶಿ ಚಿಕ್ಕಾಡೆ ಧನಂಜಯ, ವಕೀಲೆ ಎಸ್.ಆರ್.ಸುಧಾ, ಪ್ರಭಾರಿ ಶಿಕ್ಷಣ ಸಂಯೋಜಕಿ ಅನಸೂಯಾ, ನ್ಯಾಯಾಲಯದ ಸಿಬ್ಬಂದಿ ಅರುಣ್‌ಕುಮಾರ್, ಮಂಚಯ್ಯ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net