

ವಿಜಯಪುರ: ಹಳ್ಳಿ, ತಾಂಡಾ ಹಾಗೂ ದಾಬಾಗಳಲ್ಲಿ ಅಕ್ರಮ ಮಾರಾಟ ತಡೆಗಟ್ಟುವಂತೆ ಒತ್ತಾಯಿಸಿ ಜಯ ಕರ್ನಾಟಕ ರಕ್ಷಾಣಾ ಸೇನೆಯ ಪದಾಧಿಕಾರಿಗಳು ಬುಧವಾರ ಜಿಲ್ಲಾಧಿಕಾರಿ ಮತ್ತು ವಿಜಯಪುರ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಪ್ರತ್ಯೇಕ ಮನವಿ ಸಲ್ಲಿಸಿದರು.
ಸೇನೆ ಜಿಲ್ಲಾಧ್ಯಕ ಕೃಷ್ಣಾ ಭೋಸಲೆ ಮಾತನಾಡಿ, ಜಿಲ್ಲೆಯ ಹೊರವಲಯದ ರಸ್ತೆಗಳಲ್ಲಿರುವ ದಾಬಾಗಳಲ್ಲಿ ಅಕ್ರಮವಾಗಿ ಮದ್ಯ ಮಾರಲಾಗುತ್ತಿದೆ. ಅದರಿಂದ ರಸ್ತೆ ಅಪಘಾತಗಳ ಪ್ರಮಾಣದಲ್ಲಿ ಏರಿಕೆಯಾಗಿದೆ. ಕುಡಿದ ಅಮಲಿನಲ್ಲಿ ಗಲಭೆಗಳೂ ನಡೆಯುತ್ತಿವೆ.
ತಾಲೂಕಿನ ಹಲವು ಗ್ರಾಮದಲ್ಲಿ ಸರ್ಕಾರಿ ಶಾಲೆ ಹಾಗೂ ದೇವಾಲಯಗಳ ಸುತ್ತಮುತ್ತ ಸಾರ್ವಜನಿಕ ಸ್ಥಳಗಳಲ್ಲಿ ಮದ್ಯ ಮಾರಾಟ ನಡೆಯುತ್ತಿದೆ. ಅದರಿಂದ ಮಕ್ಕಳ ಭವಿಷ್ಯದ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ ಎಂದು ದೂರಿದರು.
ತಾಂಡಾಗಳಲ್ಲೂ ಅಕ್ರಮ ಮದ್ಯ ಮಾರಾಟ ಎಗ್ಗಿಲ್ಲದೆ ನಡೆಯುತ್ತಿದೆ. ಸಂಬಂಧಿಸಿದ ಅಧಿಕಾರಿಗಳು ಕಂಡು ಕಾಣದಂತಿದ್ದಾರೆ. ಕೂಡಲೇ ಅಕ್ರಮ ಮದ್ಯ ಮಾರಾಟ ತಾಣಗಳ ಮೇಲೆ ದಾಳಿ ನಡೆಸಿ ತಡೆಗಟ್ಟಬೇಕೆಂದು ಆಗ್ರಹಿಸಿದರು.
ರಾಜ್ಯ ಉಪಾಧ್ಯಕ್ಷೆ ಮಂಜುಳಾ ವಾಲಿ, ಬಸವರಾಜ ಗಳವೆ, ಸುಮಿತ್ರಾ ಪಟ್ಟಣಶೆಟ್ಟಿ, ಯಮನಪ್ಪ ಬೂದಿಹಾಳ, ಸಿದ್ದಮ್ಮ ಹಿರೂರ, ಶಶಿಕಲಾ ಹಡಪದ, ಉಮೇಶ ರುದ್ರಮಣಿ, ರಾಜು ಬಿಸೆ, ಮಾದೇವ ಢಗೆ, ರಾಜು ಕೋಟ್ಯಾಳ, ವಿಠಲ ತಳವಾರ, ಸಕಾರಾಮ ಪವಾರ ಇತರರಿದ್ದರು.