ಮಾನವ ಕಳ್ಳ ಸಾಗಣೆ ತಡೆ ಎಲ್ಲರ ಕರ್ತವ್ಯ

lwa
ಮೆಣಸೂರು ಮೌಂಟ್ ಕಾರ್ಮೆಲ್ ಪಿಯು ಕಾಲೇಜಿನಲ್ಲಿ ಮಾನವ ಕಳ್ಳ ಸಾಗಣೆ ತಡೆ ದಿನಾಚರಣೆ ಕಾರ್ಯಕ್ರಮವನ್ನು ನ್ಯಾಯಾಧೀಶ ದಾಸರಿ ಕ್ರಾಂತಿಕಿರಣ್ ಉದ್ಘಾಟಿಸಿದರು. ಶಾಂಭವಿ, ಸಿಸ್ಟರ್ ಉಷಾ, ವಿದ್ವತ್ ಗೌಡ, ಶ್ವೇತಾ ಇದ್ದರು.
Published on

ಎನ್.ಆರ್.ಪುರ: ಮಹಿಳೆಯರ ಮತ್ತು ಮಕ್ಕಳ ಕಳ್ಳ ಸಾಗಣೆ ತಡೆಯುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ನ್ಯಾಯಾಧೀಶ ದಾಸರಿ ಕ್ರಾಂತಿಕಿರಣ್ ಹೇಳಿದರು.

ಮೌಂಟ್ ಕಾರ್ಮೆಲ್ ಪಿಯು ಕಾಲೇಜಿನಲ್ಲಿ ತಾಲೂಕು ಕಾನೂನು ಸೇವಾ ಸಮಿತಿ ಆಶ್ರಯದಲ್ಲಿ ಆಯೋಜಿಸಿದ್ದ ಮಾನವ ಕಳ್ಳ ಸಾಗಣೆ ತಡೆ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಸೈಬರ್ ಕ್ರೈಂ ಪ್ರಕರಣಗಳು ಜಾಸ್ತಿಯಾಗುತ್ತಿವೆ. ಸಾಮಾಜಿಕ ಮಾಧ್ಯಮಗಳಲ್ಲಿ ಎಚ್ಚರಿಕೆಯಿಂದ ಇರಬೇಕು. ವ್ಯಾಟ್ಸ್‌ಆ್ಯಪ್, ಫೇಸ್‌ಬುಕ್‌ಗಳಲ್ಲಿ ಅನವಶ್ಯಕ ಪೋಸ್ಟ್‌ಗಳನ್ನು ಹಾಕಬಾರದು. ಓದಿನ ಕಡೆ ಹೆಚ್ಚಿನ ಆಸಕ್ತಿ ತೋರಬೇಕು ಎಂದು ಸಲಹೆ ನೀಡಿದರು.
ಸಂಪನ್ಮೂಲ ವ್ಯಕ್ತಿ ವಕೀಲ ವಿದ್ವತ್‌ಗೌಡ ಮಾತನಾಡಿ, ಮಹಿಳೆಯರು ಮತ್ತು ಮಕ್ಕಳು ಯಾವುದೇ ತೊಂದರೆಗೊಳಗಾದಲ್ಲಿ 1098 ಸಹಾಯವಾಣಿಗೆ ಕರೆ ಮಾಡಿ. ಮಾನವ ಕಳ್ಳ ಸಾಗಣೆ ಅಪರಾಧಿಗಳಿಗೆ 7 ವರ್ಷದವರೆಗೆ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಬಹುದು ಎಂದು ತಿಳಿಸಿದರು.
ಜೀತ ಪದ್ಧತಿ ಅಥವಾ ಯಾರಾದೋ ಒತ್ತಡಕ್ಕೊಳಗಾಗಿ ಕೆಲಸ ನಿರ್ವಹಿಸುತ್ತಿರುವವರ ಮಾಹಿತಿ ಇದ್ದರೆ ಪೊಲೀಸರ ಗಮನಕ್ಕೆ ತನ್ನಿ. ಶೋಷಣೆ ಮುಕ್ತ ಸಮಾಜದ ನಿರ್ಮಾಣದಲ್ಲಿ ವಿದ್ಯಾರ್ಥಿಗಳ ಪಾತ್ರ ಪ್ರಮುಖವಾಗಿರುತ್ತದೆ. ವಿದ್ಯಾರ್ಥಿಗಳು ಕಾನೂನುಗಳನ್ನು ತಿಳಿದುಕೊಂಡಿರಬೇಕು ಎಂದು ಹೇಳಿದರು.
ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದಿಂದ ಪ್ರತಿಜ್ಞಾ ವಿಧಿಯನ್ನು ವಿದ್ಯಾರ್ಥಿಗಳಿಗೆ ಬೋಧಿಸಲಾಯಿತು. ಮೌಂಟ್ ಕಾರ್ಮೆಲ್ ಕಾಲೇಜಿನ ಪ್ರಾಚಾರ್ಯೆ ಸಿಸ್ಟರ್ ಉಷಾ, ಎನ್.ಆರ್.ಪುರ ಕೋರ್ಟ್ ಸರ್ಕಾರಿ ಅಭಿಯೋಜಕಿ ಶಾಂಭವಿ, ಕಾನೂನು ಸೇವಾ ಪ್ರಾಧಿಕಾರದ ಶ್ವೇತಾ, ಮನೋಜ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net