

ಜಗದೀಶ ಹೊಂಬಳಿ, ಬೆಳಗಾವಿ
ಪ್ರಸ್ತುತ ಅಕ್ಷರಸ್ಥ ಸಮಾಜ, ನಾಗರಿಕತೆಯಿಂದಾಗಿ ಬಾಲ್ಯ ವಿವಾಹದ ಪ್ರಮಾಣ ಕಡಿಮೆಯಾಗಿದೆಯಾದರೂ ಗ್ರಾಮೀಣ ಪ್ರದೇಶಗಳಲ್ಲಿ ಕದ್ದುಮುಚ್ಚಿ ಅಪ್ರಾಪ್ತ ಹೆಣ್ಣು ಮಕ್ಕಳಿಗೆ ಮದುವೆ ಮಾಡಲಾಗುತ್ತಿದೆ. ಮಗಳಿಗೆ 18 ವರ್ಷವಾಗಿದೆ ಎಂದು ಪಾಲಕರು ತಪ್ಪು ಮಾಹಿತಿ ನೀಡಿ ಮದುವೆ ಮಾಡುತ್ತಿರುವ ಪ್ರಕರಣಗಳು ಕಂಡುಬರುತ್ತಿದ್ದು, ಇಂತಹ ಪ್ರಕರಣಗಳನ್ನು ಬೇಧಿಸಲು ಮಕ್ಕಳ ಸಹಾಯವಾಣಿ ‘1098’ ಅಧಿಕಾರಿಗಳಿಗೆ ನೆರವಾಗುತ್ತಿದೆ.
ಈ ಮೊದಲು ಎನ್‌ಜಿಒ ಮೇಲುಸ್ತುವಾರಿಯಲ್ಲಿದ್ದ ಈ ಸಹಾಯವಾಣಿ 2023ರ ಸೆಪ್ಟೆಂಬರ್‌ನಿಂದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಕಚೇರಿಯಡಿ ಕಾರ್ಯನಿರ್ವಹಿಸುತ್ತಿದೆ. ಕಳೆದ 8 ತಿಂಗಳಲ್ಲಿ ಸಹಾಯವಾಣಿಗೆ ಬಂದ ದೂರುಗಳನ್ನು ಆಧರಿಸಿ ಅಧಿಕಾರಿಗಳು ಜಿಲ್ಲೆಯಲ್ಲಿ 128 ಬಾಲ್ಯ ವಿವಾಹ ತಡೆಗಟ್ಟಿ, ಅಪ್ರಾಪ್ತ ಹೆಣ್ಣು ಮಕ್ಕಳನ್ನು ರಕ್ಷಣೆ ಮಾಡಿದ್ದಾರೆ. ಅಧಿಕಾರಿಗಳ ಕಣ್ಣು ತಪ್ಪಿಸಿ ಏಳು ಬಾಲ್ಯ ವಿವಾಹಗಳು ಆಗಿದ್ದು, ಸಂಬಂಧಿತರ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ. ಇನ್ನು ಏಳು ಶಂಕಿತ ಬಾಲ್ಯ ವಿವಾಹ ಪ್ರಕರಣಗಳಲ್ಲಿ ಸೂಕ್ತ ಸಾಕ್ಷಾೃಧಾರಗಳನ್ನು ಅಧಿಕಾರಿಗಳು ಕಲೆ ಹಾಕುತ್ತಿದ್ದು, ಬಾಲ್ಯ ವಿವಾಹಗಳನ್ನು ತಡೆಯುವುದಕ್ಕೆ ಅಧಿಕಾರಿಗಳು ಕಟ್ಟುನಿಟ್ಟಿನ ಕಾರ್ಯಾಚರಣೆ ನಡೆಸಿದ್ದಾರೆ.
2023ರ ಸೆಪ್ಟೆಂಬರ್‌ನಲ್ಲಿ 10 ಬಾಲ್ಯ ವಿವಾಹ ತಡೆಗಟ್ಟಲಾಗಿದೆ. ಅಕ್ಟೋಬರ್‌ನಲ್ಲಿ 06, ನವೆಂಬರ್‌ನಲ್ಲಿ 09, ಡಿಸೆಂಬರ್‌ನಲ್ಲಿ 10, 2024ರ ಜನವರಿಯಲ್ಲಿ 08, ಫೆಬ್ರವರಿಯಲ್ಲಿ 13, ಮಾರ್ಚ್ 15, ಏಪ್ರಿಲ್‌ನಲ್ಲಿ 30, ಮೇ ತಿಂಗಳಲ್ಲಿ 27 ಬಾಲ್ಯ ವಿವಾಹ ತಡೆಗಟ್ಟಲಾಗಿದೆ. ಬಾಲ್ಯ ವಿವಾಹಕ್ಕೆ ಕಡಿವಾಣ ಹಾಕಲು ಮತ್ತು ಬಾಲ್ಯ ವಿವಾಹಕ್ಕೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಅಧಿಕಾರಿಗಳು ಖಡಕ್ ನಿರ್ಧಾರಕ್ಕೆ ಮುಂದಾಗಿದ್ದಾರೆ.
ಅಗತ್ಯ ದಾಖಲೆಗೆ ಕಟ್ಟಾಜ್ಞೆ:
ಸರ್ಕಾರದ ನಿಯಮಾನುಸಾರ ವಿವಾಹವಾಗುವ ವೇಳೆ ಯುವತಿಗೆ 18 ಮತ್ತು ಯುವಕನಿಗೆ 21 ವರ್ಷ ಪೂರ್ಣಗೊಂಡಿರುವ ಅಗತ್ಯ ದಾಖಲೆ ಪಡೆಯುವುದನ್ನು ಕಡ್ಡಾಯಗೊಳಿಸಲಾಗಿದೆ. ಜನನ ಮತ್ತು ಮರಣದ ನೋಂದಣಾಧಿಕಾರಿ ಅಥವಾ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಪಡೆದ ಜನನ ಪ್ರಮಾಣ ಪತ್ರ, ಅದು ಲಭ್ಯವಿಲ್ಲದಿದ್ದಾಗ ಶಾಲಾ ವರ್ಗಾವಣೆ ಪ್ರಮಾಣ ಪತ್ರ, ಎಸ್ಸೆಸ್ಸೆಲ್ಸಿ ಪ್ರಮಾಣ ಪತ್ರ ಇಲ್ಲವೆ ಪ್ರವೇಶಾತಿ ದಾಖಲಾತಿ ಪಡೆಯಲಾಗುತ್ತಿದೆ. ಒಂದು ವೇಳೆ ವಯಸ್ಸಿನ ಪ್ರಮಾಣ ಪತ್ರ ಲಭ್ಯವಿಲ್ಲದಿದ್ದಾಗ ಪಾಲಕರು ಶಾಲೆಗೆ ದಾಖಲಿಸಿರುವುದಿಲ್ಲವೆಂಬ ಹೇಳಿಕೆ ಇರುವ ಆಫಿಡವಿಟ್‌ನೊಂದಿಗೆ ಸರ್ಕಾರಿ ಜಿಲ್ಲಾಸ್ಪತ್ರೆ ಆಸ್ಪತ್ರೆಯ ವೈದ್ಯಾಧಿಕಾರಿಯಿಂದ ಪಡೆದ ವಯಸ್ಸಿನ ಪ್ರಮಾಣ ಪತ್ರ ಸಲ್ಲಿಸಬೇಕು. ಜಿಲ್ಲಾಸ್ಪತ್ರೆಯ ವೈದ್ಯಾಧಿಕಾರಿಯನ್ನು ಹೊರತುಪಡಿಸಿ ಯಾವುದೇ ಇತರ ವ್ಯಕ್ತಿ, ಅಧಿಕಾರಿಯಿಂದ ಪಡೆದ ದೃಢೀಕರಣ ತರಹದ ಇತರ ದಾಖಲೆಗಳನ್ನು ವಯಸ್ಸಿನ ರುಜುವಾತಾಗಿ ಪರಿಗಣಿಸುವುದಿಲ್ಲ.