

ಕುಶಾಲನಗರ: ತೀರ್ಥರೂಪಿಣಿಯಾಗಿ ಹರಿದು ನಾಡಿನ ಜೀವನದಿಯಾಗಿರುವ ಕಾವೇರಿ ಕಲುಷಿತಗೊಳ್ಳದಂತೆ ನೋಡಿಕೊಳ್ಳುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ರೋಟರಿ ಸಂಸ್ಥೆ ಅಧ್ಯಕ್ಷ ಮನು ಪೆಮ್ಮಯ್ಯ ಹೇಳಿದರು.
ಪಟ್ಟಣದ ನಮಾಮಿ ಕಾವೇರಿ ಬಳಗ ಹಾಗೂ ರೋಟರಿ ಸಹಯೋಗದೊಂದಿಗೆ ಭಾನುವಾರ ಆಯೋಜಿಸಿದ್ದ 175ನೇ ಮಹಾ ಆರತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಾವೇರಿಯ ಆರಾಧನೆಯೊಂದಿಗೆ ನದಿ ನೀರು ಸ್ವಚ್ಛವಾಗಿ ಹರಿಯುವ ಸಂದರ್ಭ ಗ್ರಾಮ, ಪಟ್ಟಣಗಳ ಕಲುಷಿತ ನೀರು ನೇರವಾಗಿ ನದಿ ಸೇರದಂತೆ ಎಚ್ಚರ ವಹಿಸಬೇಕು. ಅಲ್ಲದೆ ನಿರಂತರವಾಗಿ ಕಾರ್ಯಕ್ರಮಗಳ ಮೂಲಕ ನದಿ ಸ್ವಚ್ಛತೆ ಬಗ್ಗೆ ನದಿ ಪರಿಸರ ಕಾಳಜಿ ವಹಿಸುತ್ತಿರುವ ಬಳಗದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ನದಿ ಸ್ವಚ್ಛತೆ ಸಂಬಂಧ ರೋಟರಿ ತನ್ನ ಅವಧಿಯಲ್ಲಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಜನರಿಗೆ ನದಿ ಸಂರಕ್ಷಣೆ ನಿಟ್ಟಿನಲ್ಲಿ ಅರಿವು ಮೂಡಿಸಲಿದೆ ಎಂದು ತಿಳಿಸಿದರು.
ಅರ್ಚಕ ಕೃಷ್ಣಮೂರ್ತಿ ಭಟ್ ಕುಂಕುಮಾರ್ಚನೆ, ಅಷ್ಟೋತ್ತರ ನಂತರ ನದಿಗೆ ಆರತಿ ಬೆಳಗಿದರು.
ರೋಟರಿ ಕಾರ್ಯದರ್ಶಿ ಎಚ್.ಪಿ.ಮಂಜುನಾಥ್, ಪ್ರಮುಖರಾದ ಎಸ್.ಕೆ.ಸತೀಶ್, ಶೋಭಾ ಸತೀಶ್, ಕಾವೇರಿ ಮಹಾ ಆರತಿ ಬಳಗದ ವನಿತಾ ಚಂದ್ರಮೋಹನ್, ಮಂಡೆಪಂಡ ಬೋಸ್ ಮೊಣ್ಣಪ್ಪ, ವೈಶಾಕ್, ಪ್ರವೀಣ್, ಧರಣಿ ಸೋಮಯ್ಯ ಮತ್ತಿತರರು ಇದ್ದರು. ಇದೇ ಸಂದರ್ಭ ರಕ್ಷಾ ಬಂಧನ ಆಚರಿಸಲಾಯಿತು.