ಜಾನುವಾರು ಅಕ್ರಮ ಸಾಗಾಟ-ವಧೆ ತಡೆಗಟ್ಟಿ; ಡಿಸಿ ಟಿ. ಭೂಬಾಲನ್

DC MEETING BAKREED
ವಿಜಯಪುರ ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅಧಿಕಾರಿಗಳ ಸಭೆ ನಡೆಸಿದರು. ಎಸ್‌ಪಿ ಋಷಿಕೇಷ ಸೋನಾವಣೆ, ಎಎಸ್‌ಪಿ ಶಂಕರ ಮಾರಿಹಾಳ, ಜಿಪಂ ಸಿಇಒ ರಿಷಿ ಆನಂದ ಮತ್ತಿತರರಿದ್ದಾರೆ.
Published on

ವಿಜಯಪುರ: ಬಕ್ರೀದ್ ಸಂದರ್ಭದಲ್ಲಿ ಅಕ್ರಮವಾಗಿ ಜಾನುವಾರು ಸಾಗಾಟ ಹಾಗೂ ವಧೆಯನ್ನು ತಡೆಗಟ್ಟಬೇಕೆಂದು ಜಿಲ್ಲಾಧಿಕಾರಿ ಟಿ.ಭೂಬಾಲನ್ ಅಧಿಕಾರಿಗಳಿಗೆ ಸೂಚಿಸಿದರು.

ನಗರದ ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಬಕ್ರೀದ್ ಹಬ್ಬದ ಸಂದರ್ಭ ಜಾನುವಾರು ಅಕ್ರಮ ಸಾಗಾಟ ಹಾಗೂ ವಧೆ ತಡೆಯುವ ನಿಟ್ಟಿನಲ್ಲಿ ಅಧಿಕಾರಿಗಳ ಸಭೆ ನಡೆಸಿ ಅವರು ಮಾತನಾಡಿದರು.

ಸರ್ಕಾರದ ನಿಯಮಾವಳಿ ಪ್ರಕಾರ ಎಲ್ಲ ವಯಸ್ಸಿನ ಆಕಳು, ಆಕಳು ಕರ, ಹೋರಿ, 13 ವರ್ಷದೊಳಗಿನ ಎಮ್ಮೆ -ಕೋಣಗಳ ವಧೆ ಮಾಡುವಂತಿಲ್ಲ. ಈ ಕಾಯ್ದೆ ಉಲ್ಲಂಘನೆಯಾಗದಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು.

ಜಿಲ್ಲೆಯ ಕನಮಡಿ, ಅರಕೇರಿ, ಸಿದ್ಧಾಪುರ, ಯತ್ನಾಳ, ಧೂಳಖೇಡ - ಶಿರಾಡೋಣ, ಅಗರಖೇಡ ದಲ್ಲಿ ಚೆಕ್ ಪೋಸ್ಟ್‌ಗಳನ್ನು ಸ್ಥಾಪಿಸಲಾಗಿದೆ. ಹಬ್ಬದ ಹಿಂದಿನ ಮೂರು ದಿನಗಳು ಅಧಿಕಾರಿಗಳು ಕಟ್ಟುನಿಟ್ಟಾಗಿ ಎಲ್ಲ ವಾಹನಗಳನ್ನು ತಪಾಸಣೆ ಮಾಡಬೇಕು ಎಂದರು.

ಹಬ್ಬದ ಮುಂಚಿನ ಮೂರು ದಿನಗಳಲ್ಲಿ ನಗರಪಾಲಿಕೆ, ಪಶುಪಾಲನಾ ಇಲಾಖೆ, ಪೊಲೀಸ್ ಇಲಾಖೆಗಳ ಅಧಿಕಾರಿಗಳ ತಂಡ ರಚಿಸಿ ಎಲ್ಲ ರೀತಿಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು. ತಾಲೂಕು ವ್ಯಾಪ್ತಿಯಲ್ಲಿ ತಹಸೀಲ್ದಾರ್ ನೇತೃತ್ವದಲ್ಲಿ ತಂಡಗಳನ್ನು ರಚಿಸಿಕೊಂಡು ಅಕ್ರಮ ಸಾಗಣೆ ಹಾಗೂ ವಧೆಯನ್ನು ತಡೆಗಟ್ಟಲು ಕಾರ್ಯೋನ್ಮುಖರಾಗಬೇಕು ಎಂದು ಹೇಳಿದರು.

13 ವರ್ಷ ದಾಟಿದ ಎಮ್ಮೆ ಹಾಗೂ ಕೊಣಗಳನ್ನು ವಧೆ ಮಾಡಬಹುದು. ಇದಕ್ಕೆ ಸಂಬಂಧಿಸಿದ ಪಶು ಇಲಾಖೆಯಿಂದ ನಿರಾಪೇಕ್ಷಣೆ ಪತ್ರ ಹಾಗೂ ವೈದ್ಯಕೀಯ ತಪಾಸಣೆ ಪತ್ರ ಹೊಂದಿರಬೇಕು ಎಂದು ತಿಳಿಸಿದರು.

ಜಾನುವಾರು ಸಾಗಾಟ ಮಾಡುವಾಗ, ಖರೀದಿಸುವಾಗ, ಮಾರಾಟ ಮಾಡುವ ಸಂದರ್ಭದಲ್ಲಿ ಜಾನುವಾರುವಿಗೆ ಕಿವಿಯೋಲೆ ಇರುವುದು ಕಡ್ಡಾಯವಾಗಿರುತ್ತದೆ ಹಾಗೂ ಸಾಗಾಣಿಕೆ ಸಂಬಂಧಪಟ್ಟಂತೆ ಅಧಿಕಾರಿಗಳಿಂದ ದೃಢೀಕರಣ ಪತ್ರ ತೆಗೆದುಕೊಂಡು ಸಾಗಾಣಿಕೆ ಮಾಡುವುದು ಕಡ್ಡಾಯವಾಗಿರುತ್ತದೆ ಎಂದರು.

ಜಿಲ್ಲೆಯ ಎಲ್ಲ ಜಾನುವಾರು ಮಾಲೀಕರು ತಮ್ಮ ಜಾನುವಾರುವಿಗೆ ಗುರುತಿನ ಸಂಖ್ಯೆ ಹೊಂದಿರುವ ಕಿವಿಯೋಲೆ ಹಾಕುವಂತೆ ನಿರ್ದೇಶನ ನೀಡಬೇಕು. ಹಬ್ಬದ ಸಂದರ್ಭದಲ್ಲಿ ಮಾಂಸದ ತ್ಯಾಜ್ಯಗಳನ್ನು ಎಲ್ಲೆಂದರಲ್ಲಿ ಬಿಸಾಡುವಂತಿಲ್ಲ. ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಬೇಕು. ಮಹಾನಗರಪಾಲಿಕೆ, ನಗರಪಾಲಿಕೆ, ಗ್ರಾಮ ಪಂಚಾಯಿತಿ ಸೇರಿದಂತೆ ಸ್ಥಳೀಯ ಸಂಸ್ಥೆಗಳು ಈ ಬಗ್ಗೆ ಮಾಂಸ ಮಾರಾಟಗಾರರಿಗೆ ತಿಳಿವಳಿಕೆ ಮೂಡಿಸಬೇಕು. ಅನಧಿಕೃತವಾಗಿ ಜಾನುವಾರು ಸಾಗಾಟ ಮಾಡುವ ವಾಹನಗಳ ನೋಂದಣಿ ರದ್ದುಪಡಿಸುವ ಕುರಿತು ಕ್ರಮ ಕೈಗೊಳ್ಳಬೇಕು ಎಂದು ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಎಸ್‌ಪಿ ಋಷಿಕೇಷ ಸೋನಾವಣೆ, ಎಎಸ್‌ಪಿ ಶಂಕರ ಮಾರಿಹಾಳ, ಜಿಪಂ ಸಿಇಒ ರಿಷಿ ಆನಂದ, ಪಶುಪಾಲನಾ ಮತ್ತು ಪಶವೈದ್ಯ ಸೇವಾ ಇಲಾಖೆಯ ಅಧಿಕಾರಿ ಅಶೋಕ ಘೊಣಸಗಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net