

ಮೈಸೂರು: ಬಾಲ್ಯವಿವಾಹ ತಡೆಯಲು ಸರ್ಕಾರದ ಪ್ರತಿಯೊಂದು ಇಲಾಖೆಗಳು ಸಾಮೂಹಿಕ ಜವಾಬ್ದಾರಿ ಹೊರಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಉಷಾರಾಣಿ ಕರೆ ನೀಡಿದರು.
ಜಿಲ್ಲಾಡಳಿತ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಪೊಲೀಸ್ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ವತಿಯಿಂದ ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ‘ಭೇಟಿ ಬಚಾವೋ ಭೇಟಿ ಪಡಾವೋ’ ಕಾರ್ಯಕ್ರಮದಡಿ ಆಯೋಜಿಸಿದ್ದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಇತ್ತೀಚೆಗೆ ಹೆಣ್ಣು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ. ಕೆಲಸದ ಸ್ಥಳಗಳಲ್ಲಿ ದೌರ್ಜನ್ಯ, ಲೈಂಗಿಕ ಕಿರುಕುಳಕ್ಕೆ ಒಳಗಾಗುತ್ತಿದ್ದಾರೆ. ಹೀಗಾಗಿ, ದೌರ್ಜನ್ಯ ತಡೆಗೆ ಇರುವ ಕಾನೂನುಗಳನ್ನು ಅರಿತು ತಡೆಯುವುದು ನಮ್ಮೆಲ್ಲರ ಮೇಲಿನ ಜವಾಬ್ದಾರಿಯಾಗಿದೆ ಎಂದರು.
ಪ್ರತಿ ಜಿಲ್ಲೆಗಳಲ್ಲಿ ವಿವಾಹ ಮೇಲ್ವಿಚಾರಣೆ ಅಧಿಕಾರಿಯನ್ನು ನೇಮಿಸಲಾಗಿದೆ. ನ್ಯಾಯಾಲಯಕ್ಕೆ ದೂರು ಬರದಿದ್ದರೂ ಸ್ವಯಂಪ್ರೇರಿತ ದೂರು ದಾಖಲಿಸಿಕೊಳ್ಳುವ ಅವಕಾಶ ನೀಡಲಾಗಿದೆ. ಬಾಲ್ಯವಿವಾಹಕ್ಕೆ ಸಂಬಂಧಿಸಿದಂತೆ ದೂರು ಬಂದಾಗ ಅಥವಾ ಮಾಹಿತಿ ಗೊತ್ತಾದ ತಕ್ಷಣ ಯಾವ ರೀತಿ ಕ್ರಮಗಳನ್ನು ಅನುಸರಿಸಬೇಕು ಎಂಬುದು ಗೊತ್ತಿರಬೇಕು. ಮಾಹಿತಿ ಗೊತ್ತಾದ ಮೇಲೆ ಸುಮ್ಮನೆ ಇರಬಾರದು ಎಂದು ಸಲಹೆ ನೀಡಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಎಂ. ಗಾಯತ್ರಿ ಮಾತನಾಡಿ, ಹೆಣ್ಣು ಮಕ್ಕಳ ಮೇಲೆ ಶೋಷಣೆ ಕೆಲವು ಕಡೆ ಕಡಿಮೆಯಾಗಿದ್ದು, ಇನ್ನು ಕೆಲವು ಕಡೆ ಹೆಚ್ಚಾಗಿದೆ. ಇದರ ಬಗ್ಗೆ ಅರಿವು ಮೂಡಿಸುವ ಸಲುವಾಗಿ ವಿವಿಧ ಇಲಾಖೆಗಳನ್ನು ಒಳಗೊಂಡಂತೆ ಕಾರ್ಯಾಗಾರವನ್ನು ಏರ್ಪಡಿಸಲಾಗಿದೆ ಎಂದರು.
ಮಕ್ಕಳಿಗೆ ಗುಡ್ ಟಚ್ ಮತ್ತು ಬ್ಯಾಡ್ ಟಚ್ ಎಂಬುವುದರ ಬಗ್ಗೆ ತಿಳಿಸಿಕೊಡಬೇಕು. ಜತೆಗೆ ಅವರಿಗೆ ಅರಿವು ಮೂಡಿಸಬೇಕು. ಮಕ್ಕಳಿಗೆ ತಿಳಿವಳಿಕೆಯನ್ನು ಮೂಡಿಸುವುದರ ಜತೆಗೆ ಸ್ವಯಂ ಶಕ್ತಿಯನ್ನು ತುಂಬಬೇಕು. ಇದರಿಂದ ತಮ್ಮನ್ನು ತಾವು ರಕ್ಷಣೆ ಮಾಡಿಕೊಳ್ಳುವಂತಹ ಸ್ವಯಂ ಶಕ್ತಿಯು ಸಹ ಮಕ್ಕಳಲ್ಲಿ ಹೆಚ್ಚಾಗುತ್ತದೆ. ಇದರಿಂದ ಮಕ್ಕಳ ಮೇಲೆ ನಡೆಯುವಂತಹ ದೌರ್ಜನ್ಯದಂತಹ ಪ್ರಕರಣಗಳು ಕಡಿಮೆಯಾಗುತ್ತವೆ ಎಂದು ತಿಳಿಸಿದರು.
ಪ್ರಾರಂಭಿಕ ಹಂತಗಳಲ್ಲಿಯೇ ನಾವು ಹೇಗೆ ಕ್ರಮವನ್ನು ತೆಗೆದುಕೊಳ್ಳುತ್ತೇವೆ ಎಂಬುದರ ಆಧಾರದ ಮೇಲೆ ಪ್ರಕರಣಗಳು ಸಹ ಕಡಿಮೆ ಆಗುತ್ತ ಹೋಗುತ್ತವೆ. ಮಕ್ಕಳು ಹಾಗೂ ಮಹಿಳೆಯರನ್ನು ಸಬಲೀಕರಣ ಮಾಡುವುದರಿಂದ ಅವರಿಗೆ ಆತ್ಮ ದೈರ್ಯ ಎಂಬುದು ಹೆಚ್ಚಾಗುತ್ತದೆ. ಹೆಣ್ಣು ಮಕ್ಕಳಲ್ಲಿ ಓದಬೇಕು ಎಂಬ ಆಸೆಯನ್ನು ತುಂಬಬೇಕು. ಶಿಕ್ಷಣವನ್ನು ಪಡೆಯುವಂತೆ ಅವರನ್ನು ಪ್ರೇರೇಪಿಸಬೇಕು. ಶಿಕ್ಷಣವನ್ನು ನೀಡುವುದರಿಂದಲೂ ಸಹ ಇಂತಹ ಪ್ರಕರಣಗಳನ್ನು ತಡೆಗಟ್ಟಬಹುದು ಎಂದು ಹೇಳಿದರು.
ಗಂಡು ಮಕ್ಕಳು ಹಾಗೂ ಹೆಣ್ಣು ಮಕ್ಕಳು ಇಬ್ಬರಿಗೂ ಸಹ ಕಾನೂನುಗಳ ಬಗ್ಗೆ ಅರಿವು ಮೂಡಿಸಬೇಕು ಹಾಗೂ ಗಂಡು ಮಕ್ಕಳು ಹೆಣ್ಣು ಮಕ್ಕಳಿಗೆ ಹೇಗೆ ಗೌರವ ಕೊಡಬೇಕು ಎಂಬುದರ ಬಗ್ಗೆ ಸಹ ತಿಳಿಸಿಕೊಡಬೇಕು ಎಂಬ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ಅಯೋಜಿಸಲಾಗಿದೆ. ಇದರಿಂದ ಅನೇಕ ದೌರ್ಜನ್ಯ ಪ್ರಕರಣಗಳನ್ನು ಕಡಿಮೆ ಮಾಡಬಹುದು ಎಂದು ಅಭಿಪ್ರಾಯಪಟ್ಟರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಜಿ. ದಿನೇಶ್ ಮಾತನಾಡಿ, ಹದಿಹರೆಯದ ವಯಸ್ಸಿನ ಮಕ್ಕಳಲ್ಲಿ ಏನೆಲ್ಲ ಬದಲಾವಣೆ ಆಗುತ್ತಿದೆ ಎಂಬುದನ್ನು ನಾವು ತಿಳಿದುಕೊಳ್ಳಬೇಕು. ಪ್ರತಿಯೊಂದು ಶಾಲೆಗಳಲ್ಲಿ ಕೌನ್ಸಿಲರ್‌ಗಳು ಇರಬೇಕು. ಇಲ್ಲದಿದ್ದರೆ ಶಿಕ್ಷಕರಿಗೆ ಕೌನ್ಸಿಲರ್‌ಗಳ ಕರ್ತವ್ಯದ ಕುರಿತು ತರಬೇತಿ ನೀಡಬೇಕು ಎಂದು ಸಲಹೆ ನೀಡಿದರು.
ಪ್ರತಿಯೊಬ್ಬ ಹೆಣ್ಣು ಮಕ್ಕಳು ತಮಗೆ ಇರುವಂತ ಕಾಯ್ದೆಗಳನ್ನು ಬಗ್ಗೆ ತಿಳಿದುಕೊಂಡು ಅದರ ಉಪಯೋಗವನ್ನು ಪಡೆದುಕೊಂಡು ನಿಮ್ಮನ್ನು ನೀವು ರಕ್ಷಣೆ ಮಾಡಿಕೊಳ್ಳಬೇಕು. ಹೆಣ್ಣು ಮಕ್ಕಳ ಮೇಲೆ ನಡೆಯುವ ದೌರ್ಜನ್ಯ ತಡೆಯುವುದು ಪೊಲೀಸ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಕೆಲಸ ಮಾತ್ರ ಅಲ್ಲ. ಪ್ರತಿಯೊಂದು ಇಲಾಖೆಗಳು ಹಾಗೂ ಸಾರ್ವಜನಿಕರು ಇದರ ಜವಾಬ್ದಾರಿ ವಹಿಸಿಕೊಳ್ಳಬೇಕು ಎಂದರು.
ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾಗೇಶ್ ಮಾತನಾಡಿ, ಇತ್ತೀಚೆಗೆ ಪೋಕ್ಸೋ ಪ್ರಕರಣಗಳು ಹೆಚ್ಚಾಗುತ್ತಿವೆ. ಇದರ ಬಗ್ಗೆ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಹೆಚ್ಚು ಗಮನ ಕೊಡಬೇಕು. ಸಹಾಯಕ್ಕಾಗಿ ಪೊಲೀಸ್ ಅಧಿಕಾರಿಗಳು ಯಾವಾಗಲೂ ಸಹ ನಿಮ್ಮ ಜತೆ ಇರುತ್ತೇವೆ ಎಂದು ಹೇಳಿದರು.
ನಗರ ಪೊಲೀಸ್ ಉಪ ಆಯುಕ್ತ ಮುತ್ತುರಾಜ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಮಕ್ಕಳ ಮೇಲೆ ಹೆಚ್ಚು ದೌರ್ಜನ್ಯ ನಡೆಯುತ್ತಿರುವುದನ್ನು ನಾವು ಕಾಣುತ್ತಿದ್ದೇವೆ. ಮಕ್ಕಳನ್ನು ಯಾವ ರೀತಿಯಲ್ಲಿ ಮುಟ್ಟುತ್ತಾ ಇದ್ದಾರೆ ಎಂಬ ಅರಿವು ಸಹ ಅವರಲ್ಲಿ ಇರುವುದಿಲ್ಲ. ಆದ್ದರಿಂದ ಪಾಲಕರು ಮಕ್ಕಳಿಗೆ ಇಂತಹ ವಿಚಾರಗಳಲ್ಲಿ ತಿಳುವಳಿಕೆಯನ್ನು ನೀಡಬೇಕು. ಅವರಿಗೆ ಮನೆಗಳಲ್ಲಿಯೇ ಇಂತಹ ವಿಚಾರಗಳ ಬಗ್ಗೆ ತಿಳಿಸಬೇಕು. ಇದರಲ್ಲಿ ಯಾವುದೇ ತರಹದ ನಾಚಿಕೆ ಎಂಬ ವಿಷಯ ಬರುವುದಿಲ್ಲ ಹಾಗೂ ಮಕ್ಕಳ ಹಕ್ಕುಗಳ ಬಗ್ಗೆ ಪಾಲಕರು ಹೆಚ್ಚು ತಿಳಿದುಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಸವಿತಾ, ಮಹಿಳಾ ಮತ್ತು ಮಕ್ಕಳ ಇಲಾಖೆಯ ಉಪನಿರ್ದೇಶಕ ಬಸವರಾಜು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ವಕೀಲರಾಧ ಎನ್.ಸುಂದರ್‌ರಾಜ್, ಎನ್.ಗೀತಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಡಿ. ಜೆ. ಮಮತ ಇದ್ದರು.