

ನುಗ್ಗೇಹಳ್ಳಿ: ಬಾಲ್ಯವಿವಾಹದ ವಿಚಾರ ತಿಳಿದರೆ ತಿಳಿಹೇಳಿ ಮದುವೆ ನಿಲ್ಲಿಸಿ. ಇಲ್ಲವಾದರೆ ಪೊಲೀಸ್ ಠಾಣೆಗೆ ಮಾಹಿತಿ ನೀಡುವುದು ಎಲ್ಲರ ಜವಾಬ್ದಾರಿ ಎಂದು ಮಹಿಳಾ ಮತ್ತು ಮಕ್ಕಳ ಇಲಾಖೆಯ ಮೇಲ್ವಿಚಾರಕಿ ಜಯಲಕ್ಷ್ಮೀ ತಿಳಿಸಿದರು.
ನುಗ್ಗೇಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕಿಯರ ಪಾಠಶಾಲೆಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಬಾಲ್ಯ ವಿವಾಹ ನಿಷೇಧ ಕುರಿತ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಹೆಣ್ಣು 18 ವರ್ಷ ತುಂಬುವ ಮೊದಲೇ ಮದುವೆಯಾದರೆ ಶಿಕ್ಷಣ ಅರ್ಧಕ್ಕೆ ನಿಲ್ಲುತ್ತದೆ. ಆರೋಗ್ಯದ ಮೇಲೆ ಸಮಸ್ಯೆ ಆಗುತ್ತದೆ. ಮಹಿಳೆಯೇ ಸ್ವಾವಲಂಬಿಯಾಗಿ ಬದುಕಲು ಸಾಧ್ಯವಾಗುವುದಿಲ್ಲ. ಜೀವನದಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹೀಗಾಗಿ ಬಾಲ್ಯ ವಿವಾಹ ತಡೆಗಟ್ಟುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದರು.
ಮುಖ್ಯಶಿಕ್ಷಕಿ ನಳಿನಾಕ್ಷಿ, ಶಿಕ್ಷಕರಾದ ಮೋಹನ್‌ಕುಮಾರ್, ಚಂದ್ರಮ್ಮ, ಅಂಗನವಾಡಿ ಕಾರ್ಯಕರ್ತೆ ಪಿ.ವೀಣಾ, ಆರೋಗ್ಯ ಇಲಾಖೆಯ ಸುಧಾ, ಗಾಯತ್ರಿ, ಆಶಾ ಕಾರ್ಯಕರ್ತರಾದ ರೇಣುಕಾ, ಹೇಮಲತಾ, ವಿದ್ಯಾರ್ಥಿನಿಯರು ಇತರರು ಇದ್ದರು.