

ರಾಯಚೂರು: ಎಪಿಎಂಸಿಯಲ್ಲಿ ಕೃಷಿ ಉತ್ಪನ್ನಗಳ ಮಾರಾಟದಲ್ಲಿ ರೈತರಿಗೆ ಆಗುತ್ತಿರುವ ಅನ್ಯಾಯಗಳನ್ನು ತಡೆಗಟ್ಟಬೇಕು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಸ್ಥಳೀಯ ಎಪಿಎಂಸಿ ಕಚೇರಿ ಮುಂದೆ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯಿಂದ ಬುಧವಾರ ಪ್ರತಿಭಟನೆ ನಡೆಸಲಾಯಿತು.
ನಂತರ ಎಪಿಎಂಸಿ ಕಾರ್ಯದರ್ಶಿ ಆದಪ್ಪಗೌಡಗೆ ಮನವಿ ಸಲ್ಲಿಸಿ, ರೈತರು ಬೆಳೆದ ಉತ್ಪನ್ನಗಳನ್ನು ಮಾರಾಟಕ್ಕೆ ತಂದಾಗ ತೂಕ ಮತ್ತು ಬೆಲೆಯಲ್ಲಿ ಸಾಕಷ್ಟು ಮೋಸ ಮಾಡಲಾಗುತ್ತಿದ್ದು, ಅದನ್ನು ತಡೆಯಲು ಎಪಿಎಂಸಿ ಆಡಳಿತ ಮಂಡಳಿ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಎಪಿಎಂಸಿ ಪ್ರಾಂಗಣದಲ್ಲಿ ಹತ್ತಿಗೆ ಒಂದು ದರ ನಿಗದಿಪಡಿಸಿ ಮಿಲ್‌ಗೆ ಹೋದಾಗ ಕ್ವಿಂಟಾಲ್‌ಗೆ 300 ರಿಂದ 400 ರೂ. ಕಡಿಮೆ ದರ ನೀಡುತ್ತಿದ್ದಾರೆ. ರೈತರು ಒಪ್ಪದಿದ್ದಾಗ ವಾಪಸ್ ತೆಗೆದುಕೊಂಡು ಹೋಗುವಂತೆ ಹೇಳುತ್ತಿದ್ದಾರೆ. ಜತೆಗೆ ಅನ್‌ಲೋಡ್, ಕೂಲಿ ಹಾಗೂ ವೇಬ್ರಿಡ್ಜ್ ವೆಚ್ಚಗಳನ್ನು ರೈತರ ಮೇಲೆ ಹಾಕುತ್ತಿದ್ದಾರೆ.
ಟೆಂಡರ್‌ಗಿಟ್ಟ ತೊಗರಿ, ಕಡಲೆ, ಸೂರ್ಯಕಾಂತಿ ರಾಶಿಯಿಂದ ಒಂದರಿಂದ ಎರಡು ಕೆಜಿವರೆಗೆ ಸ್ಯಾಂಪಲ್ ಹೆಸರಿನಲ್ಲಿ ವರ್ತಕರು ತೆಗೆದುಕೊಂಡು ಹೋಗುತ್ತಿರುವುದನ್ನು ನಿಲ್ಲಿಸಬೇಕು. ಜತೆಗೆ 50 ಕೆಜಿ ಚೀಲಕ್ಕೆ ಒಂದು ಕೆಜಿ ಸೂಟ್ ತೆಗೆಯುತ್ತಾರೆ. ಚೀಲದ ತೂಕಕ್ಕೆ ಸಮನಾಗಿ ಸೂಟ್ ತೆಗೆಯಬೇಕು.
ಮಾರುಕಟ್ಟೆ ಪ್ರಾಂಗಣದಲ್ಲಿ ಧಾನ್ಯಗಳನ್ನು ಇಡಲು ಟಿನ್‌ಶೆಡ್ ಮಾಡಲಾಗಿದ್ದರೂ ಮಳೆ ಬಂದಾಗ ಉತ್ಪನ್ನಗಳು ಮಳೆಗೆ ತೋಯುತ್ತಿದ್ದು, ತಕ್ಷಣ ಟಿಕ್‌ಶೆಡ್ ದುರಸ್ತಿಗೊಳಿಸಬೇಕು. ತೂಕವನ್ನು ದಳವಾಯಿಗಳಿಂದ ಮಾತ್ರ ಮಾಡಿಸಬೇಕು. ತರಕಾರಿ ಮಾರುಕಟ್ಟೆಯಲ್ಲಿ ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಪ್ರತಿಭಟನೆಯಲ್ಲಿ ಸಂಘದ ಜಿಲ್ಲಾಧ್ಯಕ್ಷ ಲಕ್ಷ್ಮಣಗೌಡ ಕಡಗಂದೊಡ್ಡಿ, ಪದಾಕಾರಿಗಳಾದ ಅಬ್ದುಲ್ ಮಜೀದ್, ನರಸಿಂಗರಾವ್ ಕುಲಕರ್ಣೀ, ನರಸಪ್ಪ ಯಾದವ್, ಹುಲಿಗಪ್ಪ ಜಾಲಿಬೆಂಚಿ, ಅಕ್ಕಮ್ಮ, ಹಂಪಣ್ಣ ಜಾನೇಕಲ್, ವೀರೇಶಗೌಡ, ರಮೇಶ ಗಾಣಧಾಳ, ಮಲ್ಲಿಕಾರ್ಜುನ, ತಿಮ್ಮಪ್ಪ ಬಾಪೂರ ಪಾಲ್ಗೊಂಡಿದ್ದರು.