ಮದ್ಯ ಅಕ್ರಮ ಮಾರಾಟ ತಡೆಯಿರಿ

24HDK000005
ಎಚ್.ಡಿ.ಕೋಟೆ ತಾಲೂಕಿನ ಸೀಗೂರು ಹಾಡಿಗಳಿಗೆ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಪೊಲೀಸ್ ಉಪ ಅಧೀಕ್ಷಕ ಸಿ.ಎನ್.ರಮೇಶ್ ಭೇಟಿ ನೀಡಿ, ಆದಿವಾಸಿಗಳ ಸಮಸ್ಯೆ ಆಲಿಸಿದರು.
Published on

ಎಚ್.ಡಿ. ಕೋಟೆ: ಮುಗ್ಧ ಆದಿವಾಸಿ ಜನರ ಜೀವ ಪಡೆಯುತ್ತಿರುವ ಮದ್ಯ ಅಕ್ರಮ ಮಾರಾಟ ತಡೆಯಲು ಕಠಿಣ ಕ್ರಮಗಳನ್ನು ಕೈಗೊಳ್ಳುವಂತೆ ಅಂತರಸಂತೆ ಪೊಲೀಸ್ ಠಾಣೆಯ ಅಧಿಕಾರಿಗಳಿಗೆ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಪೊಲೀಸ್ ಉಪಅಧೀಕ್ಷಕ ಸಿ.ಎನ್. ರಮೇಶ್ ಸೂಚಿಸಿದರು.

ತಾಲೂಕಿನ ಸೀಗೂರು ಹಾಡಿಗಳಿಗೆ ಬುಧವಾರ ಭೇಟಿ ನೀಡಿ, ಆದಿವಾಸಿಗಳ ಸಮಸ್ಯೆ ಆಲಿಸಿದ ನಂತರ ಪೊಲೀಸ್ ಇಲಾಖೆಯ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.

ಹಾಡಿಯಲ್ಲಿ 110 ಕುಟುಂಬದಲ್ಲಿ ಬಹುತೇಕ ಎಲ್ಲರೂ ವಲಸೆ ಕೂಲಿ ಕೆಲಸಕ್ಕೆ ತೆರಳಿದ್ದಾರೆ. ಹತ್ತಾರು ಜನ ಪುರುಷರು ಅಕ್ರಮ ಮಾರಾಟದ ಜಾಲದಿಂದ ಖರೀದಿಸಿದ ಮದ್ಯದಿಂದ ತಮ್ಮ ಜೀವ ಕಳೆದುಕೊಂಡಿದ್ದಾರೆ. ಗ್ರಾಮದಲ್ಲಿ ವೃದ್ಧರು ಏಳೆಂಟು ಜನ ಮಾತ್ರ ವಾಸಿಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. ಅಲ್ಲದೆ ತಾಲೂಕಿನ ಬಳ್ಳೆಹಾಡಿ, ಗೋಳೂರು ಹಾಡಿ, ಹುಣಸಿಕುಪ್ಪೆ ಹಾಡಿ, ಪೆಂಜಹಳ್ಳಿ ಹಾಡಿ ಸೇರಿದಂತೆ ಇತರ ಹಾಡಿಗಳಿಗೆ ಭೇಟಿ ನೀಡಿ ಅಲ್ಲಿನ ಸಮಸ್ಯೆಗಳ ಬಗ್ಗೆ ಸ್ಥಳೀಯರಿಂದ ಮಾಹಿತಿ ಪಡೆದು ನಿವಾರಣೆಗೆ ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಪೊಲೀಸ್ ಇಲಾಖೆ ಸಿಬ್ಬಂದಿ ನಾಗೇಂದ್ರ, ಸುಮತಿ ಶಿವಕುಮಾರ್, ಹಾಡಿಯ ಮುಖಂಡರಾದ ಬೈರಾ, ಭಾಸ್ಕರ್, ಹೊಸಪ್ಪ, ಕೆಂಚಮ್ಮ, ಮಂಜುಳಾ, ಗೌರಿ, ನೀಲಮ್ಮ, ಲೋಕೇಶ, ರವಿ, ಕೆಂಪ, ಲಕ್ಷ್ಮಣ, ನಾಗರಾಜು, ಕೃಷ್ಣಪ್ಪ, ಚಂದ್ರ, ಮಹೇಂದ್ರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net