

ಶಿವಮೊಗ್ಗ: ಉತ್ತರಕನ್ನಡ, ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ವೃಕ್ಷಲಕ್ಷ ಆಂದೋಲನದ ತಜ್ಞರು, ಕಾರ್ಯಕರ್ತರ ತಂಡ ಪಶ್ಚಿಮಘಟ್ಟದ ಕಾನು ಪ್ರದೇಶಗಳಿಗೆ ಶುಕ್ರವಾರ ಭೇಟಿ ನೀಡಿ ಪಶ್ಚಿಮಘಟ್ಟದಲ್ಲಿ ಅರಣ್ಯ ಭೂಮಿ ಕಬಳಿಕೆ ತಡೆಯಲು ಸಂಘಟಿತ ಹೋರಾಟ ನಡೆಸುವಂತೆ ಮತ್ತು ವೃಕ್ಷಲಕ್ಷ ಆಂದೋಲನದ ಗ್ರಾಮ ಅರಣ್ಯ ಉಳಿಸಿ ಅಭಿಯಾನಕ್ಕೆ ಕೈಜೋಡಿಸುವಂತೆ ಕರೆ ನೀಡಿದರು.
ತೀರ್ಥಹಳ್ಳಿ ತಾಲೂಕಿನ ಗುಡ್ಡೇಕೊಪ್ಪ ಗ್ರಾಮದಲ್ಲಿ ಶಾಸಕ ಆರಗ ಜ್ಞಾನೇಂದ್ರ ಅವರನ್ನು ಭೇಟಿ ಮಾಡಿದ ಪ್ರಮುಖರು, ವಿಧಾನಸಭೆಯಲ್ಲಿ ಅರಣ್ಯ ಭೂಮಿ ಕಬಳಿಕೆ ಪ್ರಕರಣಗಳ ಬಗ್ಗೆ ಧ್ವನಿ ಎತ್ತುವಂತೆ ಮನವಿ ಮಾಡಿದರು. ಬಳಿಕ ಭೀಮಸೇತು ಪ್ರಕರಣ ಎಂದೇ ಖ್ಯಾತವಾಗಿರುವ ಕುಡುಮಲ್ಲಿಗೆ, ಬೆಜ್ಜವಳ್ಳಿ ಗ್ರಾಮ ಅರಣ್ಯಗಳ ರಕ್ಷಣೆಗೆ ಮುಂದಾಗಲು ವೃಕ್ಷಲಕ್ಷ ತಂಡ ಕರೆ ನೀಡಿತು. 25 ವರ್ಷ ಹಿಂದೇ ಹೋರಾಟ ನಡೆದಿತ್ತು. ಇದೀಗ ಪುನಃ ಹೆಗ್ಗಾರಘಟ್ಟ ಉಳಿಸಿ ಹೋರಾಟ ಆರಂಭಿಸುತ್ತೇವೆ ಎಂದು ರೈತ ಮುಖಂಡರಾದ ಭಾಸ್ಕರ ಶೆಟ್ಟಿ, ರಾಜೇಶ, ತಾರಾನಾಥ, ಜಯರಾಮ್ ಹೇಳಿದರು.
ವೃಕ್ಷಲಕ್ಷ ಆಂದೋಲನ ತಂಡ ಸಿಂಧುವಾಡಿ ಅರಣ್ಯ ಪ್ರದೇಶಕ್ಕೆ ಗ್ರಾಮದ ಜನರ ಜತೆ ಭೇಟಿ ನೀಡಿತು. ರಾಜ್ಯ ಜೀವ ವೈವಿದ್ಯ ಮಂಡಳಿ ಮಾಜಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಮಾತನಾಡಿದರು. ವಲಯ ಅಧಿಕಾರಿ ಆದರ್ಶ ನಾಗರಾಜ ನಾಯ್ಕ, ಸತೀಶ, ಹಿರಿಯಣ್ಣ, ಗುರುಮೂರ್ತಿ, ಭಾಸ್ಕರ ಸೇರುದಂತೆ ಗ್ರಾಮದ ಯುವಕರು ದೇವರ ಕಾಡು ಉಳಿಸಿ ಪಾದಯಾತ್ರೆಯಲ್ಲಿ ಪಾಲ್ಗೊಂಡರು.
ವೃಕ್ಷ ಆಂದೋಲನದ ತಂಡ ಶಿವಮೊಗ್ಗದಲ್ಲಿ ಡಿಸಿಎಫ್ ಶಿವಶಂಕರ ಹಾಗೂ ಎಸಿಎಫ್ ಸುಬ್ರಮಣ್ಯ ಅವರ ಜತೆ ಸುದೀರ್ಘ ಚರ್ಚೆ ನಡೆಸಿತು. ಖಾಸಗಿಯವರಿಂದ ಅರಣ್ಯ ಭೂಮಿ ಕಬಳಿಕೆ ತಡೆಗೆ ಕಾನೂನು ಕ್ರಮ ತ್ವರಿತಗೊಳಿಸಲು ಮನವಿ ಮಾಡಿತು.