

ಚಿತ್ರದುರ್ಗ: ಬಾಲಕಾರ್ಮಿಕ ಪದ್ಧತಿ ತಡೆ ಹಾಗೂ ನಿರ್ಮೂಲನೆಗೆ ದಾಳಿ ಸಂಖ್ಯೆ ಹೆಚ್ಚಿಸುವುದರೊಂದಿಗೆ, ಪ್ರಕರಣ ದಾಖಲಿಸಿ ದಂಡ ವಿಧಿಸಬೇಕೆಂದು ಡಿಸಿ ಜಿಆರ್‌ಜೆ ದಿವ್ಯಾಪ್ರಭು ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸೊಸೈಟಿ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಮಾತನಾಡಿ, ಬಾಲ್ಯ ಹಾಗೂ ಕಿಶೋರ ಕಾರ್ಮಿಕರನ್ನು ಪತ್ತೆ ಹಚ್ಚಲು ತಾಲೂಕು ಮಟ್ಟದ ಟಾಸ್ಕ್ ಫೋರ್ಸ್ ಸಮಿತಿ ಸದಸ್ಯರು ಹಠಾತ್ ದಾಳಿ ನಡೆಸಬೇಕು ಎಂದರು.
ಚಳ್ಳಕೆರೆ ಹಾಗೂ ಮೊಳಕಾಲ್ಮೂರು ತಾಲೂಕುಗಳಲ್ಲಿ ಹೆಚ್ಚಿನ ತಪಾಸಣೆಗಳಾಬೇಕು. ಪ್ರತಿ ತಿಂಗಳು ಬಾಲಕಾರ್ಮಿಕರ ಪತ್ತೆ, ತಪಾಸಣೆ ವರದಿಯನ್ನು ತಾಲೂಕು ಮಟ್ಟದ ಟಾಸ್ಕ್ ಫೋರ್ಸ್, ಜಿಲ್ಲಾಮಟ್ಟ ಹಾಗೂ ತಾಲೂಕು ಮಟ್ಟದ ಸಮಿತಿ ಸಭೆ ನಡೆಸಿ ಪರಿಶೀಲಿಸದಿದ್ದರೆ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.
ಬಾಲಕಾರ್ಮಿಕ ಪದ್ಧತಿ ವಿರುದ್ಧ ಜಾಗೃತಿ ಮೂಡಿಸಬೇಕು. ಕಾರ್ಮಿಕ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಪೊಲೀಸ್, ಶಿಕ್ಷಣ ಸೇರಿ ವಿವಿಧ ಇಲಾಖೆಗಳು ಸಮನ್ವಯದೊಂದಿಗೆ ಕೆಲಸ ಮಾಡಬೇಕು ಎಂದರು.
ಜಿಲ್ಲಾ ಕಾರ್ಮಿಕ ಅಧಿಕಾರಿ ಸಿ.ಎನ್.ಯಶೋಧರ ಮಾತನಾಡಿ, ಒಂದು ವರ್ಷದಿಂದ ಸಮರ್ಪಕವಾಗಿ ದಾಳಿಗಳಾಗುತ್ತಿಲ್ಲ. 2022ರ ಏಪ್ರಿಲ್ 1ರಿಂದ ಈವರೆಗೆ 227 ತಪಾಸಣೆ ಮಾಡಲಾಗಿದೆ. ಮೂವರು ಬಾಲ ಕಾರ್ಮಿಕರು ಪತ್ತೆಯಾಗಿದ್ದು, ಒಂದು ಪ್ರಕರಣದಲ್ಲಿ ಎಫ್‌ಐಆರ್ ಮಾಡಲಾಗಿದೆ. ಎರಡು ಪ್ರಕರಣಗಳಲ್ಲಿ ಪತ್ತೆ ಆದ ಕಾರ್ಮಿಕರು 18 ವರ್ಷ ವಯಸ್ಸು ಮೀರಿದ್ದರಿಂದಾಗಿ ಅವರನ್ನು ಮುಖ್ಯವಾಹಿನಿಗೆ ತರಲಾಗಿದೆ ಎಂದು ತಿಳಿಸಿದರು.
ಬಾಲ ಕಾರ್ಮಿಕ ಯೋಜನಾ ಸೊಸೈಟಿ ನಿರ್ದೇಶಕ ಪಿ.ಸತೀಶ್ ಕುಮಾರ್, ಎಎಸ್‌ಪಿ ಕುಮಾರಸ್ವಾಮಿ, ಕಾರ್ಮಿಕ ನಿರೀಕ್ಷಕ ಡಿ.ರಾಜಣ್ಣ, ಡಿಡಿಪಿಐ ಕೆ.ರವಿಶಂಕರ್ ರೆಡ್ಡಿ, ತಹಸೀಲ್ದಾರ್ ನಾಗವೇಣಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಭಾರತಿ ಆರ್.ಬಣಕಾರ್, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ರೇಖಾ ಇತರರಿದ್ದರು.