

ಕಲಬುರಗಿ- ಯಾದಗಿರಿ ಕ್ಷೇತ್ರ
| ಸ.ದಾ. ಜೋಶಿ ಕಲಬುರಗಿ
ಕಲಬುರಗಿ-ಯಾದಗಿರಿ ಕ್ಷೇತ್ರದಿಂದ ಪುನರಾಯ್ಕೆ ಬಯಸಿ ಕಣಕ್ಕಿಳಿದಿರುವ ಬಿಜೆಪಿ ಅಭ್ಯರ್ಥಿ ಡಾ. ಬಿ.ಜಿ.ಪಾಟೀಲ್ ಮತ್ತೊಮ್ಮೆ ಭರ್ಜರಿ ಜಯ ಗಳಿಸುವ ಮೂಲಕ ದಾಖಲೆ ಬರೆಯುವ ತವಕದಲ್ಲಿದ್ದಾರೆ. ಕ್ಷೇತ್ರದಿಂದ ಎರಡನೇ ಸಲ ಮೇಲ್ಮನೆಗೆ ಯಾರೂ ಪ್ರೇವೆಶಿಸಿಲ್ಲ. ಹೀಗಾಗಿ ಗೆದ್ದು ಹೊಸ ದಾಖಲೆ ನಿರ್ವಿುಸಲು ಪಾಟೀಲ್ ಬೆನ್ನಿಗೆ ಕೇಸರಿಪಡೆ ನಿಂತರೆ, ಆಡಳಿತಾರೂಢರಿಗೆ ಟಕ್ಕರ್ ನೀಡುವ ನಿಟ್ಟಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶಿವಾನಂದ ಪಾಟೀಲ್ ಮರತೂರ ಇನ್ನಿಲ್ಲದ ಪ್ರಯತ್ನ ನಡೆಸಿದ್ದಾರೆ.
ಕೇಸರಿ ಪಡೆಗೆ ಹೆಚ್ಚು ಬಲ: ಹಿಂದಿನ ಚುನಾವಣೆಗೆ ಹೋಲಿಸಿದ್ದಲ್ಲಿ ಕಲಬುರಗಿ-ಯಾದಗಿರಿ ಕ್ಷೇತ್ರದಲ್ಲಿ ಇದೀಗ ಬಿಜೆಪಿ ಸಂಘಟನೆ ಬಲಿಷ್ಠವಾಗಿದೆ. 378 ಗ್ರಾಮ ಪಂಚಾಯಿತಿಗಳಿದ್ದು, ಶೇ.50ಕ್ಕೂ ಹೆಚ್ಚು ಸದಸ್ಯರು ಕೇಸರಿ ಪಡೆ ಬೆಂಬಲಿತರಿದ್ದಾರೆ. 13 ವಿಧಾನಸಭೆ ಕ್ಷೇತ್ರಗಳಲ್ಲಿ ಬಿಜೆಪಿ 7, ಕಾಂಗ್ರೆಸ್ 5 ಮತ್ತು ಒಬ್ಬರು ಜೆಡಿಎಸ್ ಶಾಸಕರಿದ್ದಾರೆ. ಲೋಕಸಭಾ ಸದಸ್ಯರ ಜತೆಗೆ ಮೂವರು ಎಂಎಲ್ಸಿ ಸಹ ಬಿಜೆಪಿಯವರೇ ಇದ್ದಾರೆ. ಕಾಂಗ್ರೆಸ್ನ ಮಲ್ಲಿಕಾರ್ಜುನ ಖರ್ಗೆ ರಾಜ್ಯಸಭೆ ಸದಸ್ಯರಿದ್ದಾರೆ. ಮಾಜಿ ಸಿಎಂ ಧರ್ಮಸಿಂಗ್, ಅಲ್ಪಸಂಖ್ಯಾತ ಪ್ರಬಲ ನಾಯಕ ಖಮರುಲ್ ಇಸ್ಲಾಂ ಅಗಲಿಕೆ ನಂತರದ ಮೊದಲ ಚುನಾವಣೆ ಇದಾಗಿದ್ದು, ಕೈ ಶಕ್ತಿ ಕುಗ್ಗಿಸಿದೆ.
ಕಳೆದ ಚುನಾವಣೆ ಫಲಿತಾಂಶ
ಬೀದರ್ ಕ್ಷೇತ್ರ
| ರೇವಣಸಿದ್ದಪ್ಪ ಪಾಟೀಲ್ ಬೀದರ್
ಬೀದರ್ ಅಖಾಡದಲ್ಲಿ ಕಾಂಗ್ರೆಸ್-ಬಿಜೆಪಿ ಮಧ್ಯೆ ನೇರ ಕುಸ್ತಿ ಬಿದ್ದಿದೆ. ಬಿಜೆಪಿಯಿಂದ ಭಾಲ್ಕಿ ಮಾಜಿ ಶಾಸಕ ಪ್ರಕಾಶ ಖಂಡ್ರೆ ಹಾಗೂ ಕಾಂಗ್ರೆಸ್ನಿಂದ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷರೂ ಆದ ಹುಮನಾಬಾದ್ ಶಾಸಕ ರಾಜಶೇಖರ ಪಾಟೀಲ್ ಸಹೋದರ ಭೀಮರಾವ ಪಾಟೀಲ್ ಸ್ಪರ್ಧಿಸಿದ್ದಾರೆ. ಇವರಿಬ್ಬರೂ ಬೀಗ ಸಂಬಂಧಿಗಳು. ಹೀಗಾಗಿ ಬೀಗರ ಫೈಟ್ನಲ್ಲಿ ಗೆಲ್ಲೋರ್ಯಾರು ಎಂಬುದು ಕದನ ಕುತೂಹಲ ಹೆಚ್ಚಿಸಿದೆ. ಕ್ಷೇತ್ರದಲ್ಲಿ ಮೊದಲಿನಿಂದಲೂ ಕಾಂಗ್ರೆಸ್ ಪಾರುಪತ್ಯ ಮೆರೆದಿದೆ. ಈವರೆಗೆ ನಡೆದ 8 ಚುನಾವಣೆಗಳಲ್ಲಿ 6 ಸಲ ಕಾಂಗ್ರೆಸ್ ಅಭ್ಯರ್ಥಿ ಗೆದ್ದರೆ, ತಲಾ ಒಮ್ಮೆ ಬಿಜೆಪಿ ಹಾಗೂ ಪಕ್ಷೇತರ ಅಭ್ಯರ್ಥಿ ಗೆದ್ದಿದ್ದಾರೆ.
ಸಚಿವ, ಶಾಸಕರಿಗೆ ಪ್ರತಿಷ್ಠೆ: ಬಿಜೆಪಿ ಸಚಿವರು ಮತ್ತು ಕಾಂಗ್ರೆಸ್ ಶಾಸಕರಿಗೆ ಈ ಚುನಾವಣೆ ಪ್ರತಿಷ್ಠೆಯಾಗಿದೆ. ಕೇಂದ್ರ ಸಚಿವ ಭಗವಂತ ಖೂಬಾ, ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ಅವರು ಖಂಡ್ರೆ ಗೆಲುವಿಗಾಗಿ ಫುಲ್ ಬ್ಯಾಟಿಂಗ್ ನಡೆಸಿದ್ದಾರೆ. ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಭಾಲ್ಕಿ ಶಾಸಕ ಈಶ್ವರ ಖಂಡ್ರೆ, ಹುಮನಾಬಾದ್ ಶಾಸಕ ರಾಜಶೇಖರ ಪಾಟೀಲ್ ಕಾಂಗ್ರೆಸ್ ಜಯಕ್ಕೆ ಕಸರತ್ತು ನಡೆಸುತ್ತಿದ್ದಾರೆ. ಕ್ಷೇತ್ರದ 6 ವಿಧಾನಸಭೆ ಕ್ಷೇತ್ರಗಳ ಪೈಕಿ ಕಾಂಗ್ರೆಸ್ 3, ಬಿಜೆಪಿ 2 ಹಾಗೂ ಒಂದು ಕ್ಷೇತ್ರದಲ್ಲಿ ಜೆಡಿಎಸ್ ಶಾಸಕರಿದ್ದಾರೆ. ನಿರ್ಣಾಯಕ ಗ್ರಾಪಂ ಸದಸ್ಯರಲ್ಲಿ ಬಿಜೆಪಿ-ಕಾಂಗ್ರೆಸ್ ಸಮಬಲದಲ್ಲಿದ್ದು, ಯಾರೇ ಗೆದ್ದರೂ ಅಂತರ ತೀರ ಕಮ್ಮಿ ಎಂಬ ಮಾತುಗಳು ಕೇಳಿಬರುತ್ತಿವೆ.
ದಳಪತಿಗಳ ನಡೆ ಇನ್ನೂ ನಿಗೂಢ: ಕಲಬುರಗಿ ಹಾಗೂ ಬೀದರ್ ಕಣದಿಂದ ಜೆಡಿಎಸ್ ದೂರ ಉಳಿದಿದೆ. ಬೀದರ್ ದಕ್ಷಿಣ, ಯಾದಗಿರಿ ಜಿಲ್ಲೆ ಗುರುಮಠಕಲ್ನಲ್ಲಿ ಮಾತ್ರ ಜೆಡಿಎಸ್ ಶಾಸಕರಿದ್ದಾರೆ. ಇದನ್ನು ಬಿಟ್ಟರೆ ಉಳಿದೆಡೆ ಪಕ್ಷದ ಸಂಘಟನೆ ಅಷ್ಟಕ್ಕಷ್ಟೆ. ತನ್ನ ಅಭ್ಯರ್ಥಿ ನಿಲ್ಲಿಸದಿರುವುದಕ್ಕೆ ಚುನಾವಣೆಯಲ್ಲಿ ಈ ಪಕ್ಷದೊಂದಿಗೆ ಗುರುತಿಸಿಕೊಂಡ ಮತದಾರರು ಯಾರಿಗೆ ಸಾಥ್ ನೀಡುತ್ತಾರೆ ಎಂಬುದು ನಿಗೂಢವಾಗಿದೆ. ಹೀಗಾಗಿ ಎರಡೂ ಪಕ್ಷಗಳ ಅಭ್ಯರ್ಥಿಗಳು ಬೀದರ್ನಲ್ಲಿ ಶಾಸಕ ಬಂಡೆಪ್ಪ ಖಾಶೆಂಪುರ ಹಾಗೂ ಗುರುಮಠಕಲ್ನಲ್ಲಿ ಶಾಸಕ ನಾಗನಗೌಡ ಕಂದಕೂರ ಮತ್ತು ಅವರ ಪುತ್ರ ಶರಣಗೌಡ ಮನವೊಲಿಕೆಯಲ್ಲಿ ತೊಡಗಿದ್ದಾರೆ.
ಕಳೆದ ಚುನಾವಣೆ ಫಲಿತಾಂಶ