ಕ್ರೀಡಾ ವಸತಿನಿಲಯ ಆರಂಭಕ್ಕೆ ಒತ್ತಡ, ಸರ್ಕಾರಿ ಆಸ್ತಿ ಪಾಳು ಬೀಳಿಸದಂತೆ ಜನಪ್ರತಿನಿಧಿಗಳ ಒತ್ತಾಯ

48bbd13b-a7e0-4fd9-abac-18a314751228
Published on

ಶಿವರಾಜ ಎಂ. ಬೆಂಗಳೂರು ಗ್ರಾಮಾಂತರ

ದೇವನಹಳ್ಳಿ ತಾಲೂಕು ವಿಶ್ವನಾಥಪುರ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲಾ ಕಟ್ಟಡದಲ್ಲಿ ಜಿಲ್ಲಾ ಕ್ರೀಡಾ ವಸತಿ ನಿಲಯ ಅರಂಭಿಸಬೇಕೆಂಬ ಕೂಗೆದ್ದಿದೆ. ಜಿಪಂ ಜನಪ್ರತಿನಿಧಿಗಳು ಈ ಬಗ್ಗೆ ಪ್ರಸ್ತಾವನೆ ಸಲ್ಲಿಸಿದ್ದು, ಸರ್ಕಾರದ ಅನುಮೋದನೆಗೆ ಎದುರು ನೋಡುತ್ತಿದ್ದಾರೆ.

ಪ್ರಸ್ತುತ ವಿಶ್ವನಾಥಪುರ ಸರ್ಕಾರಿ ಶಾಲೆ ಮಕ್ಕಳನ್ನು ಗ್ರಾಮದ ಹೊರವಲಯದಲ್ಲಿರುವ ಕರ್ನಾಟಕ ಪಬ್ಲಿಕ್ ಶಾಲಾ ಕಟ್ಟಡಕ್ಕೆ ಸ್ಥಳಾಂತರಿಸಿರುವುದರಿಂದ ಶಾಲಾ ಕಟ್ಟಡ ಖಾಲಿಯಾಗಿದ್ದು, ಅಲ್ಲಿ ಕ್ರೀಡಾ ವಸತಿನಿಲಯ ಆರಂಭಿಸಬೇಕು ಎಂಬುದು ಜನಪ್ರತಿನಿಧಿಗಳ ಒತ್ತಾಯವಾಗಿದೆ.

ಇಲಾಖೆಗೆ ಹೊಸ ಕ್ರೀಡಾ ವಸತಿ ನಿಲಯ ಮಂಜೂರಾಗುವವರೆಗೆ ಈ ಕಟ್ಟಡ ಬಳಸಬಹುದಾಗಿದೆ ಎಂಬ ಒತ್ತಾಯ ಕೇಳಿಬಂದಿದೆ.

ಪಾಳು ಬಿದ್ದಿದೆ ಕಟ್ಟಡ: ವಿಶ್ವನಾಥಪುರ ಶಾಲೆ ಕಟ್ಟಡವನ್ನು ಗ್ರಾಮಸ್ಥರು ಕೊಟ್ಟಿಗೆಯನ್ನಾಗಿ, ಜಲ್ಲಿ, ಮರಳು, ಇಟ್ಟಿಗೆಗಳ ಗೋದಾಮಾಗಿ ಬಳಸಿಕೊಳ್ಳುತ್ತಿದ್ದಾರೆ. ಮಳೆಯಿಂದ ಕಟ್ಟಡದ ಒಳಭಾಗದಲ್ಲಿ ನೀರು ಸೋರುತ್ತಿದೆ. ಕಟ್ಟಡದ ನಿರ್ವಹಣೆ ಮಾಡಿ ಕ್ರೀಡಾ ವಸತಿ ನಿಲಯಕ್ಕೆ ಬಳಸುವುದರಿಂದ ಕಟ್ಟಡದ ರಕ್ಷಣೆ ಜತೆಗೆ ಜಿಲ್ಲೆಯ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಿದಂತಾಗುತ್ತದೆ ಎಂಬುದು ಜನಪ್ರತಿನಿಧಿಗಳ ವಾದ.

ಅಕ್ರಮ ಚಟುವಟಿಕೆ ತಾಣ: ಶಾಲಾ ಮಕ್ಕಳ ವರ್ಗಾವಣೆ ಬಳಿಕ ಇತ್ತ ಕಡೆ ಸಾರ್ವಜನಿಕರು ಬರುವುದು ಕಡಿಮೆಯಾಗಿದೆ. ರಾತ್ರಿ ವೇಳೆ ಅಕ್ರಮ ಚಟುವಟಿಕೆ ತಾಣವಾಗಿ ಬಳಕೆಯಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಮದ್ಯದಂಗಡಿಗಳಲ್ಲಿ ಪಾರ್ಸಲ್‌ಗಷ್ಟೆ ಅವಕಾಶವಿರುವುದರಿಂದ ಕಿಡಿಗೇಡಿಗಳು ಮದ್ಯದಂಗಡಿಗಳಿಂದ ಮದ್ಯ ಖರೀದಿಸಿ ಶಾಲಾ ಆವರಣವನ್ನೆ ಕುಡಿತದ ಅಡ್ಡೆಯನ್ನಾಗಿ ಬಳಸುತ್ತಿದ್ದಾರೆ ಎಂಬುದು ಸ್ಥಳೀಯರ ಆರೋಪ.

ಸರ್ಕಾರದ ಆಸ್ತಿ-ಪಾಳು ಬೀಳಲು ಬಿಡಬಾರದು, ಇಲಾಖೆಗಳ ನಡುವೆ ಸಮನ್ವಯದ ಮೂಲಕ ಎಲ್ಲರಿಗೂ ಅನುಕೂಲವಾಗುವಂತೆ ಕಾರ್ಯರೂಪಿಸಬೇಕು. ಕಟ್ಟಡದ ನಿರ್ವಹಣೆ ಜತೆಗೆ ಕ್ರೀಡಾ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುವುದು ಔಚಿತ್ಯವಾಗಿದೆ. ಜಯಮ್ಮ ಲಕ್ಷ್ಮೀನಾರಾಯಣ, ಜಿಪಂ ಅಧ್ಯಕ್ಷೆ ಶಾಲಾ ಮಕ್ಕಳನ್ನು ಕರ್ನಾಟಕ ಪಬ್ಲಿಕ್ ಶಾಲೆಗೆ ವರ್ಗಾವಣೆ ಮಾಡಿರುವುದರಿಂದ ಕಟ್ಟಡ ಖಾಲಿ ಇದೆ. ಕ್ರೀಡಾ ವಸತಿನಿಲಯಕ್ಕೆ ಅನುವು ಮಾಡಿಕೊಡುವುದರಿಂದ ಸರ್ಕಾರಿ ಕಟ್ಟಡ ಉತ್ತಮ ಕಾರ್ಯಕ್ಕೆ ಬಳಕೆಯಾಗಲಿದೆ. ಈ ಬಗ್ಗೆ ಸಂಬಂಧಪಟ್ಟವರು ಸೂಕ್ತ ಕ್ರಮಕೈಗೊಳ್ಳಬೇಕು. ಕನ್ಯಾಕುಮಾರಿ ಶ್ರೀನಿವಾಸ್, ಜಿಪಂ ಉಪಾಧ್ಯಕ್ಷೆ ದೇವನಹಳ್ಳಿ ತಾಲೂಕಿಗೆ ಕ್ರೀಡಾ ವಸತಿ ನಿಲಯವಿಲ್ಲದಿರುವುದು ಬೇಸರದ ಸಂಗತಿ. ಗ್ರಾಮೀಣ ಮಕ್ಕಳ ಕ್ರೀಡಾ ಕೌಶಲ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ವಸತಿನಿಲಯ ಅವಶ್ಯಕವಾಗಿದೆ. ಈ ನಿಟ್ಟಿನಲ್ಲಿ ಖಾಲಿ ಬಿದ್ದಿರುವ ಕಟ್ಟಡವನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಕೆ.ಸಿ.ಮಂಜುನಾಥ್, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಶಾಲಾ ಕಟ್ಟಡ ಪಾಳು ಬಿದ್ದು ಹಾಳಾಗುತ್ತಿರುವುದರಿಂದ ಕ್ರೀಡಾ ವಸತಿನಿಲಯ ಆರಂಭಿಸಲು ಕ್ರಮಕೈಗೊಳ್ಳಬೇಕು. ಕ್ರೀಡಾ ಇಲಾಖೆಗೆ ಹೊಸ ಕಟ್ಟಡ ಮಂಜೂರಾದ ಬಳಿಕ ಹಿಂತಿರುಗಿಸುವ ಷರತ್ತಿಗೊಳಪಟ್ಟಂತೆ ಶೀಘ್ರ ಕ್ರಮಕೈಗೊಳ್ಳಬೇಕು. ಸರ್ಕಾರ ಆಸ್ತಿಯ ರಕ್ಷಣೆಗೆ ಜತೆಗೆ ಬಳಕೆಗೆ ಅನುಕೂಲ ಮಾಡಿಕೊಡಬೇಕು. ಬಾಲೇಪುರ ಲಕ್ಷ್ಮಿನಾರಾಯಣ, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net