

ಬೆಂಗಳೂರು: ಉಪ ಚುನಾವಣೆ ಫಲಿತಾಂಶದ ಬಳಿಕ ಸಚಿವ ಸಂಪುಟ ವಿಸ್ತರಿಸುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿಕೆ ನೀಡಿದ ಬಳಿಕ ಆಕಾಂಕ್ಷಿಗಳು ಒತ್ತಡ ತಂತ್ರಕ್ಕೆ ಮುಂದಾಗಿದ್ದಾರೆ. ಸಂಪುಟಕ್ಕೆ ಸೇರಲು ಬಯಸಿದವರ ಪಟ್ಟಿ ದೊಡ್ಡದಿದೆ. ಹೀಗಾಗಿ ಮಹೂರ್ತ ನಿಗದಿಗೆ ಮುನ್ನವೇ ಪ್ರಭಾವಿಗಳ ಮೂಲಕ ಸಚಿವ ಸ್ಥಾನ ಖಚಿತಪಡಿಸಿಕೊಳ್ಳುವ ಕಸರತ್ತಿಗೆ ಕೈಹಾಕಿದ್ದಾರೆ. ವಿಧಾನ ಪರಿಷತ್ ಸದಸ್ಯರಾದ ಎಚ್.ವಿಶ್ವನಾಥ್ ಹಾಗೂ ಆರ್.ಶಂಕರ್ ದೆಹಲಿಗೆ ಪ್ರಯಾಣ ಬೆಳೆಸಿದ್ದು, ಬಿಜೆಪಿಯೊಳಗೆ ಚರ್ಚೆಗೆ ಎಡೆಮಾಡಿದೆ. ಅಲ್ಲದೆ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಜತೆಗೆ ಇವರಿಬ್ಬರೂ ಪ್ರಯಾಣ ಬೆಳೆಸಿರುವುದರಿಂದ ಇನ್ನಷ್ಟು ಕುತೂಹಲ ಕೆರಳಿಸಿದೆ.
ಇನ್ನೂ ಅಸ್ಪಷ್ಟ: ಕೊಟ್ಟ ಮಾತು ಉಳಿಸಿಕೊಳ್ಳಲು ಬಿಎಸ್ವೈ ತುದಿಗಾಲ ಮೇಲೆ ನಿಂತಿದ್ದಾರೆ. ಈ ಹಿನ್ನೆಲೆಯಲ್ಲಿ ಸಚಿವ ಸಂಪುಟ ವಿಸ್ತರಣೆಗೆ ಹೆಚ್ಚಿನ ಒತ್ತಾಸೆ ನೀಡಿದ್ದಾರೆ. ವಲಸಿಗರ ಜತೆಗೆ ಪಕ್ಷ ಮೂಲದವರಿಂದ ಹೆಚ್ಚುತ್ತಿರುವ ಒತ್ತಡವು ವರಿಷ್ಠರ ಗಮನಸೆಳೆದಿದೆ. ಹೀಗಾಗಿ ವಿಸ್ತರಣೆಯೋ ಅಥವಾ ಪುನರ್ ರಚನೆಯೋ? ಎನ್ನುವುದು ಇನ್ನೂ ಅಸ್ಪಷ್ಟವಾಗಿದೆ. ಸಿ.ಟಿ.ರವಿ ರಾಜೀನಾಮೆ ಅಂಗೀಕಾರದ ಬಳಿಕ ತೆರವಾದ ಸಚಿವ ಸ್ಥಾನಗಳ ಸಂಖ್ಯೆ 7ಕ್ಕೇರಿದೆ. ಈ ಪೈಕಿ ವಲಸಿಗರಾದ ಎಂ.ಬಿ.ನಾಗರಾಜ್, ಆರ್.ಶಂಕರ್ಗೆ ಸಚಿವ ಸ್ಥಾನ ಸಿಗಲಿದೆ ಎಂದು ಸ್ವತಃ ಬಿಎಸ್ವೈ ಸುಳಿವು ನೀಡಿಯಾಗಿದೆ.
ರಾಜರಾಜೇಶ್ವರಿ ನಗರ ವಿಧಾನಸಭೆ ಉಪ ಚುನಾವಣೆಯಲ್ಲಿ ಮುನಿರತ್ನ ಗೆದ್ದರೆ ಅವರಿಗೂ ಮಂತ್ರಿ ಪದವಿ ದಕ್ಕಲಿದ್ದು, ಮಸ್ಕಿ ಪ್ರತಾಪಗೌಡರಿಗೆ 1 ಸ್ಥಾನ ಮೀಸಲಿಡಬೇಕಾಗುತ್ತದೆ. ಈ ಲೆಕ್ಕಾಚಾರದ ಪ್ರಕಾರ 7ರಲ್ಲಿ 4 ವಲಸಿಗರ ಪಾಲಾಗಲಿವೆ. 3 ಸ್ಥಾನಗಳು ಪಕ್ಷ ಮೂಲದವರಿಗೆ ಲಭ್ಯವಾಗಲಿದ್ದರೆ, ಉಮೇಶ್ ಕತ್ತಿ, ಅರವಿಂದ ಲಿಂಬಾವಳಿ, ತಿಪ್ಪಾರೆಡ್ಡಿ, ಹಾಲಪ್ಪ ಸೇರಿ 7-8 ಆಕಾಂಕ್ಷಿಗಳಿದ್ದಾರೆ.
ದುರುದ್ದೇಶ ಪೂರ್ವಕ: ಆಡಳಿತ ವ್ಯವಸ್ಥೆ ಶಿಥಿಲ ಮಾಡುವ ದುರುದ್ದೇಶದಿಂದಲೇ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮುಖ್ಯಮಂತ್ರಿ ಬದಲಾವಣೆ ಕುರಿತು ಹೇಳಿಕೆ ನೀಡುತ್ತಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಕಿಡಿಕಾರಿದ್ದಾರೆ. ದೆಹಲಿಯಲ್ಲಿ ಸುದ್ದಿಗಾರರಿಗೆ ಭಾನುವಾರ ಪ್ರತಿಕ್ರಿಯಿಸಿದ ಅವರು, ದುರುದ್ದೇಶ ಇಲ್ಲವೆಂದಾದರೆ ಅವರಿಗೆ ನಮ್ಮ ಪಕ್ಷದ ಬಗ್ಗೆ ಹೇಗೆ ಗೊತ್ತು ? ಎಂದೂ ಕೇಳಿದರು. ಅಲ್ಲದೆ, ಸಿಎಂ ಬದಲಾವಣೆ ಚಿಂತನೆ ಪಾರ್ಲಿಮೆಂಟ್ ಬೋರ್ಡ್ ಮುಂದಿಲ್ಲವೆಂದು ಸ್ಪಷ್ಟಪಡಿಸಿದರು. ಬಸನಗೌಡ ಪಾಟೀಲ ಯತ್ನಾಳ್ರಿಗೆ ಆಂತರಿಕವಾಗಿ ಏನು ಎಚ್ಚರಿಕೆ ನೀಡಬೇಕೋ ಅದನ್ನು ನೀಡಿಯಾಗಿದೆ ಎಂದರು.
ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳ ಸಭೆ ಹಿನ್ನೆಲೆಯಲ್ಲಿ ದೆಹಲಿಗೆ ಬಂದಿರುವೆ. ಎಂಎಲ್ಸಿಗಳಾದ ಎಚ್.ವಿಶ್ವನಾಥ್ ಮತ್ತು ಆರ್.ಶಂಕರ್ ಬಗ್ಗೆ ಮಾಹಿತಿಯಿಲ್ಲ. ಪ್ರಯಾಣದ ವೇಳೆ ಅವರನ್ನು ನಾನು ಗಮನಿಸಿಯೂ ಇಲ್ಲ. | ಸಿ.ಟಿ.ರವಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಚುನಾವಣೆ ಸಂದರ್ಭದಲ್ಲಿ ನಮ್ಮ ನಿರೀಕ್ಷೆ ಹಾಗೂ ಮತದಾನೋತ್ತರ ಸಮೀಕ್ಷೆ ನಿಜವಾಗಿದೆ. ಶಿರಾ ಹಾಗೂ ಆರ್.ಆರ್.ನಗರ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ದೊಡ್ಡ ಅಂತರದ ಗೆಲುವು ಸಾಧಿಸಲಿದ್ದಾರೆ. | ಬಿ.ಎಸ್.ಯಡಿಯೂರಪ್ಪ ಸಿಎಂ